ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ಪ್ರವರ್ಗ 2(ಎ)ಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಹತ್ವದ ಸಭೆ ನಡೆಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಶಿವರಾಜ ತಂಗಡಗಿ, ಶಾಸಕರುಗಳಾದ ವಿನಯ್ ಕುಲಕರ್ಣಿ, ವಿಜಯ್ ಕಾಶಪ್ಪನವರ್, ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು, ಸಮುದಾಯದ 40 ಕ್ಕೂ ಹೆಚ್ಚು ಮುಖಂಡರು, ವಕೀಲರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಪಂಚಮಸಾಲಿ ಸಮುದಾಯದ ಸಚಿವರು, ಮುಖಂಡರು, ಸ್ವಾಮೀಜಿಗಳು, ವಕೀಲರ ಜತೆ ಚರ್ಚೆ ನಡೆಸಿದ್ದಾರೆ ಸಿಎಂ ಸಿದ್ದರಾಮಯ್ಯನವರು. ಆ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗುತ್ತಾ ಬಂದರೂ ತಮ್ಮ ಬೇಡಿಕೆ ಈಡೇರಿಸಿಲ್ಲವೆಂದು ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದರು. ಆ ನಂತರ ಸಮುದಾಯದ ಮುಖಂಡರು ಮುಖ್ಯಮಂತ್ರಿ ಮನವೊಲಿಸಿ ಸಭೆ ನಿಗದಿ ಮಾಡಿದ್ದಾರೆ. ಈಗಾಗಲೇ ಪ್ರವರ್ಗ 2(ಎ)ನಲ್ಲಿರುವ ಅನೇಕ ಸಮುದಾಯಗಳು ಪಂಚಮಸಾಲಿ ಸಮುದಾಯವನ್ನು ಸೇರ್ಪಡೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಆದ್ದರಿಂದ ಸಭೆಯಲ್ಲಿ ಸಿಎಂ ಕೈಗೊಳ್ಳಲಿರುವ ನಿರ್ಧಾರ ಕುತೂಹಲಕ್ಕೆ ಕಾರಣವಾಗಿದೆ.