ಪಂಚಮಸಾಲಿ ಲಿಂಗಾಯತರ ಹೋರಾಟ ಒಂದು ರೀತಿ ಕಾಂಗ್ರೆಸ್ ಶಾಸಕರಿಗೆ ಪೀಕಲಾಟ ಎನ್ನುವಂತಾಗಿದೆ. ಕಾಂಗ್ರೆಸ್ ನ ಲಿಂಗಾಯತ ಶಾಸಕರಿಗೆ ಅತ್ತ ದರಿ..ಇತ್ತ ಪುಲಿ ಕಾಟ ಎಂಬಂತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇತ್ತ ಸರ್ಕಾರವನ್ನೂ ಡಿಫೆನ್ಸ್ ಮಾಡಿಕೊಳ್ಳುವ ಅನಿವಾರ್ಯತೆ ಇದ್ದರೇ, ಅತ್ತ ಪಂಚಮಸಾಲಿ ಮೀಸಲಾತಿ ಹೋರಾಟವನ್ನೂ ಬೆಂಬಲಿಸೋ ಆಸ್ಥೆ ಕೂಡ ಇದೆ. ಹೀಗಾಗಿ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ ಕಾಂಗ್ರೆಸ್ನ ಲಿಂಗಾಯತ ಶಾಸಕರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ ಸೇರಿ ಅನೇಕ ಲಿಂಗಾಯತ ನಾಯಕರಿಗೆ ಟೆನ್ಶನ್ ಶುರುವಾಗಿ ಬಿಟ್ಟಿದೆ. ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆದಿದೆ, ಹೀಗಾಗಿ ಕಾಂಗ್ರೆಸ್ ಶಾಸಕರು ಮತ್ತಷ್ಟು ಇಕ್ಕಟ್ಟಿನ ಸ್ಥಿತಿ ತಲುಪಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ನೆಗೆಟಿವ್ ಎಫೆಕ್ಟ್ ಆಗುವ ಭೀತಿ ಎದುರಾಗಿದೆ. ಕಾರಣ ಪಂಚಮಸಾಲಿ ಮೀಸಲಾತಿ ಹೋರಾಟ ಈ ಬಾರಿ ನಡೆಯುತ್ತಿರುವುದು ಬೆಳಗಾವಿಯಲ್ಲಿ, ಅದರ ಜೊತೆ ಅಧಿವೇಶನ ಕೂಡ ಬೆಳಗಾವಿಯಲ್ಲಿ ನಡೆಯುತ್ತಿದೆ. ಇಡೀ ಸರ್ಕಾರವೇ ಬೆಳಗಾವಿಯಲ್ಲಿ ಇರುವುದರಿಂದ ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆ ಬಹಳಷ್ಟಿದೆ.
ಇದೇ ಸಮಯದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದರೆ, ಬಿಜೆಪಿಗೆ ಕಾಂಗ್ರೆಸ್ ಸರ್ಕಾರವೇ ಅಸ್ತ್ರ ಮಾಡಿಕೊಟ್ಟ ಫಜೀತಿ ಎದುರಿಸಬೇಕಾಗುತ್ತದೆ. ಪ್ರತಿಷ್ಠೆಯಾಗಿ ತೆಗೆದುಕೊಂಡು ಹೋರಾಟ ತೀವ್ರಗೊಳಿಸಿದ್ರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. 2ಎ ಮೀಸಲಾತಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವುದು ಫಿಕ್ಸ್ ಅಂತನೇ ಹೇಳಬಹುದು. ಏಕೆಂದರೇ ಕಳೆದ 4 ವರ್ಷಗಳಿಂದ ಪಂಚಮಸಾಲಿ ಲಿಂಗಾಯತ ನಾಯಕರು ಹೋರಾಟ ಮಾಡುತ್ತಿದ್ದಾರೆ. ಇದನ್ನೇ ಬಿಜೆಪಿ ಎನ್ ಕ್ಯಾಶ್ ಮಾಡಿಕೊಂಡ್ರೆ..ಹೋರಾಟಕ್ಕೆ ರಾಜಕೀಯ ಬಲ ಬಂದಂತಾಗುತ್ತದೆ. ಈಗಾಗಲೇ ಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿದೆ, ಹೀಗಾಗಿ ಮುಂದಿನ ದಿನಗಳಲ್ಲಿ ಮೀಸಲಾತಿ ಹೋರಾಟ ಕಾವೇರೋದು ನಿಶ್ಚಿತ.