ಬಹುನಿರೀಕ್ಷಿತ ಪ್ಯಾರಾಲಿಂಪಿಕ್ಸ್ಗೆ ಅಧಿಕೃತ ಚಾಲನೆ ದೊರೆತಿದೆ. ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ 184 ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಈ ಸಮಾರಂಭಕ್ಕೂ ಮುನ್ನ ಹಾಲಿವುಡ್ ನಟ ಜಾಕಿ ಚಾನ್ ಒಲಂಪಿಕ್ ಜ್ಯೋತಿಯನ್ನು ಹೊತ್ತು ತಂದರು. ಇನ್ನು ಈ ವರ್ಣರಂಜಿತ ಸಮಾರಂಭವನ್ನು ವೀಕ್ಷಿಸಲು 50,000 ಕ್ಕೂ ಹೆಚ್ಚು ಪ್ರೇಕ್ಷಕರು ಹಾಜರಿದ್ದರು. ರಾಷ್ಟ್ರಗಳ ಪರೇಡ್ನಲ್ಲಿ ಭಾರತವನ್ನು ಸುಮಿತ್ ಆಂಟಿಲ್ ಮತ್ತು ಭಾಗ್ಯಶ್ರೀ ಜಾಧವ್ ಮುನ್ನಡೆಸಿದರು.
ಈ ಬಾರಿ 84 ಭಾರತೀಯ ಸ್ಪರ್ಧಿಗಳು ಒಟ್ಟು 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ 38 ಸ್ಪರ್ಧಿಗಳು ಅಥ್ಲೆಟಿಕ್ಸ್ನಲ್ಲಿ ಕಣಕ್ಕಿಳಿಯಲಿರುವುದು ವಿಶೇಷ. ಇದಲ್ಲದೆ, ಆರ್ಚರಿ, ಈಜು, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಸೈಕ್ಲಿಂಗ್, ಪವರ್ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಜುಡೋ, ಪ್ಯಾರಾಕೆನೋಯಿಂಗ್, ಟೆಕ್ವಾಂಡೋ ಕ್ರೀಡೆಗಳಲ್ಲಿ ಭಾರತೀಯರು ಕಣಕ್ಕಿಳಿಯಲಿದ್ದಾರೆ.
17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ಬುಧವಾರದಿಂದ ಆರಂಭವಾಗಿದ್ದು, ವಿಕಲಚೇತನರ ಈ ಕ್ರೀಡಾಕೂಟವು ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ 184 ದೇಶಗಳ 4400 ಕ್ಕೂ ಹೆಚ್ಚಿನ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಇವರಲ್ಲಿ 84 ಭಾರತೀಯ ಸ್ಪರ್ಧಿಗಳಿರುವುದರಿಂದ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗುತ್ತಿದೆ.