ಮುಡಾ ಹಗರಣ, ಸಿಎಂ ಬದಲಾವಣೆ ಚರ್ಚೆ, ದಲಿತ ಸಿಎಂ ಕೂಗು ಈ ಎಲ್ಲ ಬೆಳವಣಿಗೆಗಳ ಮಧ್ಯೆ ಮಂಗಳವಾರ ರಾತ್ರಿ ಮೈಸೂರಿನಲ್ಲಿ ಸಚಿವ ಮಹದೇವಪ್ಪ ನಿವಾಸದಲ್ಲಿ ಗೃಹ ಸಚಿವ ಜಿ ಪರಮೇಶ್ವರ, ಸತೀಶ್ ಜಾರಕಿಹೊಳಿ ಡಿನ್ನರ್ ಮಾಡಿದ್ದಾರೆ. ಡಿನ್ನರ್ ಮೀಟಿಂಗ್ ರಹಸ್ಯವೇನು ಎಂಬುದನ್ನು ಪರಮೇಶ್ವರ್ ಅವರು ಮಾತನಾಡಿದ್ದಾರೆ.
ಸಚಿವ ಮಹದೇವಪ್ಪ ನಿವಾಸದಲ್ಲಿ ಕಾಂಗ್ರೆಸ್ ದಲಿತ ನಾಯಕರ ಡಿನ್ನರ್ ಮೀಟಿಂಗ್ ವಿಚಾರವಾಗಿ ಮೈಸೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಮಹದೇವಪ್ಪ ಮನೆಯಲ್ಲಿ ಡಿನ್ನರ್ ಅರೇಂಜ್ ಅಗಿತ್ತು. ಊಟಕ್ಕೆ ಹೋಗಿದ್ದೆವು ಅಷ್ಟೆ. ಮೈಸೂರಿನ ಆತಿಥ್ಯ ಬಿಡುವುದಕ್ಕೆ ಆಗುತ್ತದೆಯೇ? ಡಿನ್ನರ್ಗೆ ಬೇರೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ನಾನು, ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಶಾಸಕ ಎ.ಆರ್.ಕೃಷ್ಣಮೂರ್ತಿ ರಾತ್ರಿ ಡಿನ್ನರ್ ಮಾಡಿದ್ದೆವು. ಈ ವೇಳೆ ಯಾವುದೇ ರಾಜಕೀಯ ವಿಚಾರಗಳು ಚರ್ಚೆ ನಡೆದಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
ಸಿಎಂ ಬದಲಾವಣೆ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯ ಇಲ್ಲ. ನಾವು ಆಗಾಗ ಈ ರೀತಿ ಸೇರುತ್ತಿರುತ್ತೇವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ತಿಳಿಸಿದರು. ದಲಿತ ಸಿಎಂ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, ಸದ್ಯ ಈ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಹೇಳಿದರು.