ಇಡೀ ವಿಶ್ವವೇ ಎದುರು ನೋಡುತ್ತಿರುವ ಒಲಿಂಪಿಕ್ಸ್ ಹಬ್ಬಕ್ಕೆ ಇನ್ನು ಕೇವಲ ಒಂದೇ ಒಂದು ದಿನ ಬಾಕಿಯಿದೆ. ಕ್ರೀಡಾಕೂಟವನ್ನು ಕಣ್ತುಂಬಿಕೊಳ್ಳಲು ಪ್ಯಾರಿಸ್ ಅಂಗಳಕ್ಕೆ ಜನಸಾಗರವೇ ಹರಿದು ಬರಲಿದೆ. ಒಲಿಂಪಿಕ್ಸ್ ಅಂದ್ರೆ ಪ್ರತಿ ವರ್ಷವೂ ಯಾವ ದೇಶದಲ್ಲಿ ಆಯೋಜಿಸಲಾಗುತ್ತದೆಯೋ ಆ ದೇಶ ಈ ಹಿಂದಿನಿಂದ ನಡೆದು ಬಂದ ಪರಂಪರೆಯನ್ನು ಪಾಲಿಸುತ್ತಲೇ ಬಂದಿದೆ. ಉದ್ಘಾಟನಾ ಸಮಾರಂಭದಿಂದ ಹಿಡಿದು, ಕ್ರೀಡಾಕೂಟದ ಮುಕ್ತಾಯ ಸಮಾರಂಭದವರೆಗೂ ಒಂದು ಪದ್ಧತಿಯನ್ನು ಜಾರಿಯಲ್ಲಿಟ್ಟುಕೊಂಡೇ ಬಂದಿದೆ. ಆದ್ರೆ ಈ ಬಾರಿ ಪ್ಯಾರಿಸ್ನಲ್ಲಿ ಒಂದು ಪರಂಪರೆ ಬದಲಾಗಿದೆ. ಇದೇ ಮೊದಲ ಬಾರಿಗೆ ಉದ್ಘಾಟನೆಯ ಸಮಾರಂಭ ಬೇರೆ ರೂಪದಲ್ಲಿ ಕಾಣಿಸಿಕೊಳ್ಳಲಿದೆ.
ಕ್ರೀಡಾಂಗಣದಲ್ಲಿ ನಡೆಯೋದಿಲ್ಲ ಉದ್ಘಾಟನಾ ಸಮಾರಾಂಭ
ಪ್ಯಾರಿಸ್ನಲ್ಲಿ ನಡೆಯಲಿರುವ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೊಸವಾಕ್ಯ ಬರೆಯಲು ಫ್ರಾನ್ಸ್ ಪ್ರೇಮಿಗಳ ನಗರಿ ಸಿದ್ಧತೆ ನಡೆಸಿದೆ. ಇತಿಹಾಸದಲ್ಲಿ ಮೊದಲ ಬಾರಿ ಕ್ರೀಡಾಂಗಣದ ಆಚೆ ಒಲಿಂಪಿಕ್ಸ್ ಉದ್ಘಾಟನಾ ಸಮಾರಾಂಭಕ್ಕೆ ಸಾಕ್ಷಿಯಾಗಲಿದೆ ಪ್ಯಾರಿಸ್. ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿ ಪ್ಯಾರಿಸ್ನಲ್ಲಿ ಕ್ರೀಡಾಂಗಣದಾಚೆ ಉದ್ಘಾಟನೆ ಸಮಾರಂಭ ನಡೆಯಲಿದೆ. ಕ್ರೀಡಾಂಗಣದಿಂದ ಫ್ರಾನ್ಸ್ ರಾಜಧಾನಿಯ ಐಕಾನಿಕ್ ಥಿಯೇಟರ್ನಲ್ಲಿ ಈ ಬಾರಿ ಉದ್ಘಾಟನಾ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಕ್ರೀಡಾ ಪ್ರಿಯರಿಗೆ ಗಣ್ಯರಿಗೆ ಅವಕಾಶ ಮಾಡಲಾಗಿದೆ. ಪ್ರತಿ ಬಾರಿ ಒಲಿಂಪಿಕ್ಸ್ನಲ್ಲಿ ನಡೆಯುತ್ತಿದ್ದ ಕ್ರೀಡಾಂಗಣದ ಟ್ರ್ಯಾಕ್ ಮೇಲೆ ನಡೆಯುತ್ತಿದ್ದ ತಂಡಗಳ ಮೆರವಣಿಗೆಯಲ್ಲಿಯೂ ಕೂಡ ಬದಲಾವಣೆಯಾಗಲಿದೆ. ಈ ಬಾರಿ ಪ್ಯಾರಿಸ್ನ ಸೈನ್ ನದಿಯ ಬೋಟ್ಗಳಲ್ಲಿ ಕ್ರೀಡಾಳುಗಳು ಉದ್ಘಾಟನೆಯ ಪರೇಡ್ ನಡೆಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಲಿದ್ದಾರೆ. ಅತಿಥಿಗಳು ಗಣ್ಯರಿಗೆ ಈ ಅದ್ದೂರಿ ಮೆರವಣಿಗೆಯನ್ನು ನೋಡಲು ಫ್ರಾನ್ಸ್ ರಾಜಧಾನಿಯ ಹೃದಯ ಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಒಟ್ಟು 100 ಬೋಟ್, 10,500 ಕ್ರೀಡಾಳುಗಳಿಂದ ಒಲಿಂಪಿಕ್ಸ್ ಮೆರವಣಿಗೆ
ಪ್ರತಿ ಬಾರಿ ಒಲಿಂಪಿಕ್ಸ್ ಉದ್ಘಾಟನೆಯ ವೇಳೆ ಆಯಾ ದೇಶದ ಕ್ರೀಡಾಳುಗಳು ತಮ್ಮ ದೇಶದ ರಾಷ್ಟ್ರಧ್ವಜವನ್ನು ಹಿಡಿದು ಉದ್ಘಾಟನೆಗೆ ನೇಮಿಸಲಾಗಿದ್ದ ಕ್ರೀಡಾಂಗಣದಲ್ಲಿ ಮೆರವಣಿಗೆ ಹೊರಟು ಬರುತ್ತಿದ್ದಿದ್ದು ಪರಂಪರೆಯ ಒಂದು ಭಾಗವಾಗಿ ನಮಗೆ ಕಾಣಸಿಗುತ್ತಿತ್ತು. ಆದ್ರೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇದು ಬದಲಾವಣೆ ಆಗುತ್ತಿದೆ. ಈಗಾಗಲೇ ಹೇಳಿದಂತೆ ಸೈನ್ ನದಿಯಲ್ಲಿ ನಡೆಯಲಿರುವ ಉದ್ಘಾಟನೆಗೆ ಈಗಾಗಲೇ ನೂರು ಬೋಟ್ಗಳು ಸಜ್ಜಾಗಿವೆ. ಒಟ್ಟು 10,500 ಕ್ರೀಡಾಳುಗಳು ಬೋಟ್ನಲ್ಲಿ ಕುಳಿತು, ತಮ್ಮ ದೇಶದ ರಾಷ್ಟ್ರಧ್ವಜವನ್ನು ಹಿಡಿದು ಸೈನ ನದಿಯ ತೀರದಲ್ಲಿ ಮೆರವಣಿಗೆಗೆ ಹೊರಡಲು ವೇದಿಕೆಯೊಂದು ಸಿದ್ಧವಾಗಿದೆ. ಒಲಿಂಪಿಕ್ಸ್ನಲ್ಲಿ ಭಾಗಿಯಾಗಲಿರುವ ಪ್ರತಿಯೊಬ್ಬ ಕ್ರೀಡಾಳು ಅಂದು ತಮ್ಮ ಜೀವನದ ವಿಶೇಷ ಸವಾರಿಯೊಂದಕ್ಕೆ ಸಾಕ್ಷಿಯಾಗಲಿದ್ದಾರೆ. ಈಗಾಗಲೇ ಪರೇಡ್ ದೃಶ್ಯದ ಸೆರೆಗಾಗಿ ಮಾಡಬೇಕಾಗಿರುವ ಕ್ಯಾಮೆರಾ ವ್ಯವಸ್ಥೆಗಳನ್ನು ಅವುಗಳನ್ನು ಇಡಬೇಕಾದ ಜಾಗವನ್ನು ಕೂಡ ಆಯೋಜಕರು ನಿರ್ಧರಿಸಿದ್ದಾರೆ. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೇರೆಯದ್ದೇ ರೀತಿಯ ಉದ್ಘಾಟನಾ ಸಮಾರಂಭಕ್ಕೆ ಇಡೀ ಜಗತ್ತು ಮೊದಲ ಬಾರಿ ಸಾಕ್ಷಿಯಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ನಾಳೆ ಸಂಜೆ 7.30ಕ್ಕೆ ಪ್ಯಾರಿಸ್ ನಗರದ ಸೈನ್ ನದಿಯಲ್ಲಿ 2024ರ ಒಲಿಂಪಿಕ್ಸ್ನ ಉದ್ಘಾಟನೆ ನೆರವೇರುತ್ತಿದೆ.