ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ ಆರನೇ ಪದಕವನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಚೊಚ್ಚಲ ಒಲಿಂಪಿಕ್ಸ್ ಆಡುತ್ತಿರುವ ಅಮನ್ ಸೆಹ್ರಾವತ್ ಪುರುಷರ 57 ಕೆಜಿ ತೂಕ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪೋರ್ಟೊ ರಿಕೊ ಕುಸ್ತಿಪಟು ಡೇರಿಯನ್ ಟೊಯಿ ಕ್ರೂಜ್ ಅವರನ್ನು 13-5 ರಿಂದ ಏಕಪಕ್ಷೀಯವಾಗಿ ಸೋಲಿಸುವ ಮೂಲಕ ಅಮನ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಆರನೇ ಪದಕ ದಕ್ಕಿದೆ. ಒಟ್ಟಾರೆ, ಈ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ 5 ನೇ ಕಂಚಿನ ಪದಕವಾಗಿದ್ದರೆ, ಕುಸ್ತಿಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿದೆ.
ಅಮನ್ ಅವರ ಈ ಪದಕದೊಂದಿಗೆ 2008 ರಿಂದ ಕುಸ್ತಿಯಲ್ಲಿ ಭಾರತದ ಪದಕದ ಗೆಲುವಿನ ಸರಣಿ ಮುಂದುವರೆದಿದೆ. 2008 ರಿಂದ ಇಲ್ಲಿಯವರೆಗೆ, ಭಾರತವು ಸತತ 5 ಒಲಿಂಪಿಕ್ಸ್ಗಳಲ್ಲಿ ಕುಸ್ತಿಯಲ್ಲಿ ಪದಕಗಳನ್ನು ಗೆದ್ದಿದೆ. ಇದರೊಂದಿಗೆ ಹಾಕಿ ನಂತರ, ಭಾರತಕ್ಕೆ ಗರಿಷ್ಠ ಸಂಖ್ಯೆಯ ಪದಕ ಬಂದಿರುವುದು ಈ ಕುಸ್ತಿಯಲ್ಲಿ. ಇದುವರೆಗೆ ಭಾರತ ಕುಸ್ತಿಯಲ್ಲಿ 8 ಒಲಿಂಪಿಕ್ ಪದಕಗಳನ್ನು ಗೆದ್ದುಕೊಂಡಿದೆ.