33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅದ್ಧೂರಿಯಾಗಿ ಫ್ರಾನ್ಸ್ನ ಪ್ಯಾರಿಸ್ನಲ್ಲಿ ಆರಂಭಗೊಂಡಿದೆ. ಸೆನ್ ನದಿಯ ಮೇಲೆ ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೋಟ್ ಮೂಲಕ ಸ್ಪರ್ಧಿಗಳ ಪಥಸಂಚಲನ ಕಾರ್ಯಕ್ರಮ ನಡೆಯಿತು. ಮೊದಲಿಗೆ ಗ್ರೀಸ್ ತಂಡ ಆಗಮಿಸಿತು. ಬಳಿಕ ಫ್ರೆಂಚ್ ಅಕ್ಷರಮಾಲೆಯ ಪ್ರಕಾರ ದೇಶದ ಸ್ಪರ್ಧಿಗಳು ಆಗಮಿಸಿದರು. ಕೆಲ ತಂಡಗಳಿಗೆ ಪ್ರತ್ಯೇಕ ಬೋಟ್ ಸಿಕ್ಕರೆ, 3-4 ತಂಡಗಳನ್ನು ಒಟ್ಟಿಗೆ ಸೇರಿಸಿ ಬೋಟ್ನಲ್ಲಿ ಪಥ ಸಂಚಲನ ನಡೆಸಿದರು. ಪಥ ಸಂಚಲನದ ವೇಳೆ ತುಂತುರು ಮಳೆ ಬಂದರೂ ಸ್ಪರ್ಧಿಗಳು ಉತ್ಸಾಹದಿಂದ ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು. ಸೀನ್ ನದಿಯ ಆಸ್ಟರ್ಲಿಟ್ಜ್ ಬ್ರಿಡ್ಜ್ನ ಬಳಿ ಆರಂಭಗೊಂಡ ಪಥ ಸಂಚಲನ 6 ಕಿ.ಮೀ ದೂರದಲ್ಲಿರುವ ಐಫಲ್ ಟವರ್ ಬಳಿ ಮುಕ್ತಾಯಗೊಂಡಿತು.
ಭಾರತ 14ನೇ ತಂಡವಾಗಿ ಆಗಮಿಸಿತು. ಭಾರತದ ಬೋಟ್ನಲ್ಲಿ ಇಂಡೋನೇಷ್ಯಾ ಹಾಗೂ ಇರಾನ್ ತಂಡದ ಸ್ಪರ್ಧಿಗಳು ಇದ್ದರು. ಅತಿಥ್ಯ ವಹಿಸಿರುವ ಫ್ರಾನ್ಸ್ ಕೊನೆಯ ತಂಡವಾಗಿ ಆಗಮಿಸಿದರೆ 2028ರ ಒಲಿಂಪಿಕ್ಸ್ಗೆ ಆತಿಥ್ಯ ನೀಡಲಿರುವ ಅಮೆರಿಕ ಕೊನೆಯಿಂದ ಎರಡನೇ ತಂಡವಾಗಿ ಪ್ರವೇಶಿಸಿತು. ಬೋಟ್ ಮೂಲಕ ಆಗಮಿಸಿದ ಎಲ್ಲಾ ತಂಡಗಳಿಗೆ ಕಾರಂಜಿ ಮೂಲಕ ವಾಟರ್ ಸೆಲ್ಯೂಟ್ ನೀಡಲಾಯಿತು. ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಭಾರತದ ಒಟ್ಟು 78 ಮಂದಿ ಕ್ರೀಡಾಪಟುಗಳು ಭಾಗಿಯಾಗಿದ್ದರು. ಎರಡು ಒಲಿಂಪಿಕ್ಸ್ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಮತ್ತು ಟೇಬಲ್ ಟೆನಿಸ್ ಪಟು ಶರತ್ ಕಮಾಲ್ ಅವರು ಭಾರತದ ಧ್ವಜಧಾರಿಗಳಾಗಿ ಪಥಸಂಚಲನವನ್ನು ಮುನ್ನಡೆಸಿದರು̤