ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಮಹಿಳಾ ಧ್ವಜಧಾರಿಯಾಗಿ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಅವರನ್ನು ಆಯ್ಕೆ ಮಾಡಲಾಗಿದ್ದು, ಈ ಬಗ್ಗೆ ಭಾರತೀಯ ಒಲಿಂಪಿಕ್ ಸಂಸ್ಥೆ ಸೋಮವಾರ ಪ್ರಕಟಿಸಿದೆ. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಭಾರತ ತಂಡದ ಚೀಫ್ ಡಿ ಮಿಷನ್ ಆಗಿ ನೇಮಕಗೊಂಡಿದ್ದಾರೆ.
ಮಹಿಳಾ ಬಾಕ್ಸರ್ ಮೇರಿ ಕೋಮ್ ರಾಜೀನಾಮೆಯಿಂದ ತೆರವಾಗಿದ್ದ ಚೀಫ್ ಡಿ ಮಿಷನ್ ಸ್ಥಾನಕ್ಕೆ ಉಪ ಸಿಡಿಎಂ ಆಗಿರುವ 41 ವರ್ಷದ ಗಗನ್ ನಾರಂಗ್ ಅವರನ್ನು ನೇಮಿಸಲಾಗಿದ್ದು, ನಾರಂಗ್ ಅವರು ಮೇರಿ ಕೋಮ್ ಸ್ಥಾನ ತುಂಬಲು ಅರ್ಹರು ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿಟಿ ಉಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎರಡು ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಸಿಂಧು, ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಪುರುಷ ಧ್ವಜಧಾರಿ ಟೇಬಲ್ ಟೆನಿಸ್ ಆಟಗಾರ ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಶರತ್ ಕಮಲ್ಗೆ ಸಾಥ್ ನೀಡಲಿದ್ದಾರೆ.