ಇತ್ತೀಚೆಗೆ ಮುಗಿದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅದ್ಭುತ ಸಾಧನೆ ಬೆನ್ನಲ್ಲೇ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಶೂಟರ್ ಮನು ಬಾಕರ್ ಬ್ರ್ಯಾಂಡ್ ವ್ಯಾಲ್ಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ನೀರಜ್ ಬ್ರ್ಯಾಂಡ್ ಮೌಲ್ಯ ಹಲವು ಕ್ರಿಕೆಟಿಗರನ್ನು ಮೀರಿದೆ. ಅವರ ವ್ಯಾಲ್ಯೂ ಇದೀಗ 330 ಕೋಟಿ ರುಪಾಯಿಗೆ ತಲುಪಿದೆ. ಇದು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಹೊಂದಿರುವ ಬ್ರ್ಯಾಂಡ್ ವ್ಯಾಲ್ಯೂಗೆ ಸಮನಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಏರಲಿದೆ ಎಂದು ವರದಿಯೊಂದು ತಿಳಿಸಿದೆ. ಈ ಮೊದಲು ಪ್ರತಿ ಜಾಹೀರಾತಿಗೆ 3 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದ ನೀರಜ್ ಸಂಭಾವನೆ ಇದೀಗ 4 ರಿಂದ 4.50 ಕೋಟಿಗೆ ಏರಿಕೆಯಾಗಿದೆ.
ಇನ್ನೊಂದೆಡೆ ಒಲಿಂಪಿಕ್ಸ್ ಮಹಿಳಾ ಶೂಟಿಂಗ್ ವಿಭಾಗದಲ್ಲಿ ಎರಡು ಕಂಚಿನ ಪದಕ ಗೆದ್ದು ದಾಖಲೆ ಬರೆದ ಮನು ಬಾಕರ್ ಬ್ರ್ಯಾಂಡ್ ವ್ಯಾಲ್ಯೂ ಕೂಡಾ ಭಾರೀ ಏರಿಕೆ ಕಂಡಿದೆ. ಒಲಿಂಪಿಕ್ಸ್ಗೂ ಮುನ್ನ ಪ್ರತಿ ಜಾಹೀರಾತಿಗೆ 25 ಲಕ್ಷ ರುಪಾಯಿ ಶುಲ್ಕ ವಿಧಿಸುತ್ತಿದ್ದ ಮನು ಬಾಕರ್, ಒಲಿಂಪಿಕ್ ಮುಗಿದ ಬೆನ್ನಲ್ಲೇ ತಮ್ಮ ಶುಲ್ಕವನ್ನು 1 ರಿಂದ 1.5 ಕೋಟಿ ರುಪಾಯಿವರೆಗೂ ಏರಿಸಿದ್ದಾರೆ. ಅವರನ್ನು ಒಳಗೊಂಡ ಜಾಹೀರಾತಿಗಾಗಿ 40ಕ್ಕೂ ಹೆಚ್ಚು ಕಂಪನಿಗಳು ಈಗಾಗಲೇ ಸಂಪರ್ಕ ಮಾಡಿವೆ ಎಂದು ವರದಿಗಳು ತಿಳಿಸಿವೆ.