ಭಾರತದ ಪ್ಯಾರಾ ಜೂಡೋ ಆಟಗಾರ ಕಪಿಲ್ ಪರ್ಮಾರ್ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದಿದ್ದಾರೆ. ಪುರುಷರ 60 ಕೆಜಿ ಜೆ1 ಸ್ಪರ್ಧೆಯ ಕಂಚಿನ ಪದಕಕ್ಕಾಗಿ ಕಪಿಲ್ ಬ್ರೆಜಿಲ್ನ ಎಲಿಟನ್ ಡಿ ಒಲಿವೇರಾ ಅವರನ್ನು 10-0 ಅಂತರದಿಂದ ಸೋಲಿಸಿ ಕಂಚು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಪಿಲ್ ಪ್ಯಾರಾಲಿಂಪಿಕ್ಸ್ ಅಥವಾ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಜೂಡೋ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ತನ್ನ ಪದಕಗಳ ಸಂಖ್ಯೆಯನ್ನು 25ಕ್ಕೆ ಏರಿಸಿಕೊಂಡಿದೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 5 ಚಿನ್ನ, 9 ಬೆಳ್ಳಿ ಮತ್ತು 11 ಕಂಚಿನ ಪದಕಗಳನ್ನು ಗೆದ್ದಿದೆ.
2022ರ ಏಷ್ಯನ್ ಗೇಮ್ಸ್ನಲ್ಲಿ ಇದೇ ವಿಭಾಗದಲ್ಲಿ ಪರ್ಮಾರ್ ಬೆಳ್ಳಿ ಪದಕ ಗೆದ್ದಿದ್ದರು. ಅವರು ಕ್ವಾರ್ಟರ್ ಫೈನಲ್ನಲ್ಲಿ ವೆನೆಜುವೆಲಾದ ಮಾರ್ಕೊ ಡೆನಿಸ್ ಬ್ಲಾಂಕೊ ಅವರನ್ನು 10–0 ರಿಂದ ಸೋಲಿಸಿದರು. ಆದರೆ ಸೆಮಿ-ಫೈನಲ್ನಲ್ಲಿ ಇರಾನ್ನ ಎಸ್ ಬನಿತಾಬಾ ಖೋರಮ್ ಅಬಾಡಿ ವಿರುದ್ಧ ಸೋತಿದ್ದರು. ಎರಡೂ ಪಂದ್ಯಗಳಲ್ಲಿ ಪರ್ಮಾರ್ ತಲಾ ಒಂದು ಹಳದಿ ಕಾರ್ಡ್ ಪಡೆದರು. ಕಪಿಲ್ ಚಿನ್ನ ತರಲು ಸಾಧ್ಯವಾಗದಿದ್ದರೂ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅಂಧ ಅಥವಾ ಕಡಿಮೆ ದೃಷ್ಟಿ ಹೊಂದಿರುವ ಆಟಗಾರರು ಪ್ಯಾರಾ ಜೂಡೋದಲ್ಲಿ J1 ವಿಭಾಗದಲ್ಲಿ ಸ್ಪರ್ಧಿಸುತ್ತಾರೆ.