ಸಾಫ್ಟ್ವೇರ್ ಸಂಸ್ಥೆ ಪಿಡಿಆರ್ಎಲ್, ಡ್ರೋನ್ ಸೇವಾ ಪೂರೈಕೆದಾರರು ಮತ್ತು ರೈತರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಭೂಮೀಟ್ ಎನ್ನುವ ಸಾಫ್ಟ್ವೇರ್ ಅನ್ನು ಬುಧವಾರ ಅನಾವರಣಗೊಳಿಸಿದೆ. ಭೂಮೀಟ್ ಬಳಸಿ ಡ್ರೋನ್ ಸೇವೆಯನ್ನು ಒದಗಿಸುವವರನ್ನು ಗುರುತಿಸಿ, ಡ್ರೋನ್ಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ. ಸೇವೆ ಒದಗಿಸುವ ಸಂಸ್ಥೆಯ ಹಿನ್ನೆಲೆ ತಿಳಿದುಕೊಳ್ಳುವುದಕ್ಕೂ ಅವಕಾಶ ಇದೆ. ‘ಭೂಮೀಟ್ ರೈತರು ಮತ್ತು ವಿಶ್ವಾಸಾರ್ಹ ಸೇವಾ ಪೂರೈಕೆದಾರರ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಡ್ರೋನ್ ತಂತ್ರಜ್ಞಾನದ ಸಹಾಯದೊಂದಿಗೆ ಕೃಷಿಕ ಸಮುದಾಯವನ್ನು ಸಶಕ್ತಗೊಳಿಸಲಿದೆ’ ಎಂದು ಪಿಡಿಆರ್ಎಲ್ ಸಂಸ್ಥಾಪಕ ಮತ್ತು ಸಿಇಒ ಅನಿಲ್ ಚಾಂಡಲಿಯಾ ಹೇಳಿದ್ದಾರೆ.
ಭೂಮೀಟ್, ರೈತರೊಂದಿಗೆ ಡ್ರೋನ್ ಸೇವೆಯನ್ನು ಸಂಪರ್ಕಿಸುವ ಭಾರತದ ಮೊದಲ ಸಾಸ್ ವೇದಿಕೆ (ಸಾಫ್ಟ್ವೇರ್ ಆಧಾರಿತ ಸೇವೆ) ಆಗಿದೆ. ದೇಶದಾದ್ಯಂತ ಕೃಷಿಯನ್ನು ಆಧುನೀಕರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ‘ಪ್ರಾಯೋಗಿಕ ಯೋಜನೆಯ ಭಾಗವಾಗಿ ದಕ್ಷಿಣ ಭಾರತ ಮತ್ತು ಗುಜರಾತ್ನ ಆಯ್ದ ಪ್ರದೇಶದಲ್ಲಿ ಆರಂಭಿಸಲಾಗಿದೆ. 2024ರ ಅಂತ್ಯದ ವೇಳೆಗೆ ದೇಶದೆಲ್ಲೆಡೆ ಇದನ್ನು ವಿಸ್ತರಿಸಲಾಗುವುದು’ ಎಂದು ಪಿಡಿಆರ್ಎಲ್ ಸಂಸ್ಥಾಪಕ ಮತ್ತು ಸಿಟಿಒ ವಿಶಾಲ್ ಧರಂಕರ್ ಹೇಳಿದ್ದಾರೆ. ಭೂಮೀಟ್ ಪ್ರಸ್ತುತ 6 ಭಾಷೆಯಲ್ಲಿ ಲಭ್ಯವಿದ್ದು, ನೂರಕ್ಕೂ ಹೆಚ್ಚು ಸೇವಾ ಪೂರೈಕೆದಾರರು ಇದರಲ್ಲಿ ನೋಂದಣಿಯಾಗಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.