ಕೋವಿಡ್ ಬಳಿಕ ಕಾರು ಖರೀದಿಗೆ ವರ್ಷಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿ ಗ್ರಾಹಕರು ಬೇಸತ್ತಿದ್ದರೆ, ಇದೀಗ ಗ್ರಾಹಕರಿಲ್ಲದೇ ಕಂಪನಿಗಳು ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ದೇಶದ ವಿವಿಧ ಭಾಗಗಳ ಶೋರೂಂಗಳಲ್ಲಿ ಹಾಲಿ 73000 ಕೋಟಿ ರುಪಾಯಿ ಮೌಲ್ಯದ 7.3 ಲಕ್ಷ ಕಾರುಗಳು ಇನ್ನು ಮಾರಾಟಕ್ಕೆ ಕಾದಿವೆ ಎಂದು ಫೆಡರೇಷನ್ ಆಫ್ ಅಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಹೇಳಿದೆ. ವರ್ಷದ ಮೊದಲಾರ್ಧದಲ್ಲಿ ಲೋಕಸಭೆ ಚುನಾವಣೆ, ಹವಾಮಾನ ವೈಪರೀತ್ಯದಿಂದ ಜನ ಕಾರು ಖರೀದಿಯಿಂದ ಹಿಂದೆಸರಿದಿದ್ದರು.
ಜೊತೆಗೆ ಕಂಪನಿಗಳು ಹೊಸ ಮಾದರಿ ಬಿಡುಗಡೆ ಮಾಡುತ್ತಿರುವ ಕಾರಣ ಹಳೆಯ ಕಾರುಗಳು ಹಾಗೆಯೇ ಉಳಿದುಕೊಂಡಿದೆ. ಸಾಮಾನ್ಯವವಾಗಿ ಸರಾಸರಿ 65-67 ದಿನದವರೆಗೆ ಪೂರೈಕೆಗೆ ಸಾಕಾಗುವಷ್ಟಿದ್ದ ಕಾರು ಶೋ ರೂಂ ಅಥವಾ ಸಗಟು ಮಾರಾಟಗರರ ಬಳಿ ಇರುತ್ತದೆ. ಇದೀಗ ಈ ಪ್ರಮಾಣ 70-75 ದಿನದವರೆಗೆ ಏರಿಕೆಯಾಗಿದೆ. ಇದೇ ಗತಿ ಮುಂದುವರೆದರೆ ಕಾರು ಉತ್ಪಾದನಾ ಕಂಪನಿಗಳು, ಮಾರಾಟಗಾರರು ಸಂಕಷ್ಟ ಎದುರಿಸಬೇಕಾಗಿ ಬರುತ್ತದೆ ಎಂದು ಎಫ್ಎಡಿಎ ಹೇಳಿದೆ.