ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ನಲ್ಲಿ ನಡೆದಿದ್ದ ಗೋಧ್ರಾ ರೈಲು ದುಂರಂತ ಹಿಂದಿನ ಕತೆ ಆಧಾರಿತ `ಸಬರಮತಿ ರಿಪೋರ್ಟ್’ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಸಿನಿಮಾ ನೋಡುತ್ತಿರುವ ಫೋಟೋಗಳನ್ನು ಪ್ರಧಾನಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ವೀಕ್ಷಿಸುವುದಲ್ಲದೇ ಚಿತ್ರದ ನಿರ್ಮಾಣಕ್ಕಾಗಿ ಉತ್ತಮ ಪ್ರಯತ್ನ ಮಾಡಿದ ನಿರ್ಮಾಪಕರನ್ನು ಹಾಗೂ ಚಿತ್ರ ತಂಡವನ್ನು ಶ್ಲಾಘಿಸಿದ್ದಾರೆ.
ನರೇಂದ್ರ ಮೋದಿಯವರ ಜೊತೆ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಕಿರಣ್ ರಿಜಿಜು, ಜಿತನ್ ರಾಮ್ ಮಾಂಝಿ, ಅಶ್ವಿನಿ ವೈಷ್ಣವ್ ಸೇರಿದಂತೆ NDA ಸಂಸದರು ಸಹ ಸಿನಿಮಾ ವೀಕ್ಷಿಸಿದ್ದಾರೆ. ನಟ ವಿಕ್ರಾಂತ್ ಮಾಸ್ಸೆ ಮತ್ತು ಜಿತೇಂದ್ರ ಕೂಡ ಸಿನಿಮಾ ವೀಕ್ಷಿಸಿದರು. ವಿಕ್ರಾಂತ್ ಮಾಸ್ಸೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಲನಚಿತ್ರವು 2002 ರಲ್ಲಿ ಗುಜರಾತ್ನಲ್ಲಿ ನಡೆದಿದ್ದ ಗೋಧ್ರಾ ರೈಲು ದುರಂತದ ಕಥೆಯನ್ನು ಒಳಗೊಂಡಿದೆ. ಈ ಸಿನಿಮಾವನ್ನು ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಅಮುಲ್ ವಿ ಮೋಹನ್ ಮತ್ತು ಅನ್ಶುಲ್ ಮೋಹನ್ ನಿರ್ಮಿಸಿದ್ದು, ಧೀರಜ್ ಸರ್ನಾ ನಿರ್ದೇಶಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಕೂಡ ನಟಿಸಿದ್ದಾರೆ. ಹಿಂದೆ ಸಿನಿಮಾ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಮೋದಿ, ಈ ಘಟನೆಯ ಸತ್ಯ ಹೊರಬರುತ್ತಿರುವುದು ಒಳ್ಳೆಯದು. ಸಾಮಾನ್ಯ ಜನರು ಇದನ್ನು ಸಿನಿಮಾ ಮೂಲಕ ನೋಡಬಹುದು. ಈ ಚಲನಚಿತ್ರವನ್ನು ಜನರು ನೋಡಲೇಬೇಕು. ದುರಂತದ ಹಿಂದಿನ ಸತ್ಯವನ್ನು ಬಹಿರಂಗಪಡಿಸುವಲ್ಲಿ ಚಿತ್ರತಂಡ ಶ್ರಮಿಸಿದೆ ಎಂದು ಚಿತ್ರತಂಡವನ್ನು ಕೊಂಡಾಡಿದೆ. ಒಡಿಶಾ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತವಿರುವ ಏಳು ರಾಜ್ಯಗಳು ‘ದಿ ಸಬರಮತಿ ರಿಪೋರ್ಟ್’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿವೆ.