ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಖಂಡಿಸಿ, ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪರ ನಿಲ್ಲುವ ಬಗ್ಗೆ ಒಕ್ಕೊರಲ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ನಿಂತಿದ್ದು, ಇದೀಗ ಶಾಸಕರೂ ನಿಲ್ಲುವ ಸಾಧ್ಯತೆಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಇಂದು ಸಂಜೆ 4 ಗಂಟೆಗೆ ಸಿಎಲ್ಪಿ ಸಭೆ ನಡೆಯಲಿದೆ. ಈಗಾಗಲೇ ಈ ಸಂಬಂಧ ಪಕ್ಷದ ಎಲ್ಲಾ ಶಾಸಕರಿಗಳಿಗೂ ಮಾಹಿತಿ ರವಾನಿಸಿದ್ದು, ತಪ್ಪದೆ ಹಾಜರಾಗುವಂತೆ ಸೂಚಿಸಿದ್ದಾರೆ.
ಸಭೆಯಲ್ಲಿ ಮುಡಾ ಹಗರಣ ಪ್ರಕರಣದ ವಿಚಾರ ಚರ್ಚೆಗೆ ಬರಲಿದೆ. ಪ್ರಕರಣದಲ್ಲಿ ಮುಖ್ಯಮಂತ್ರಿಯವರ ನೇರವಾದ ಯಾವುದೇ ಪಾತ್ರವಿಲ್ಲದ ಬಗ್ಗೆ ಹಾಗೂ ವಿವೇಚನಾರಹಿತವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್’ಗೆ ಅನುಮತಿ ನೀಡಿರುವ ಕುರಿತು ಎಲ್ಲಾ ಶಾಸಕರಿಗೂ ಮನವರಿಕೆ ಮಾಡಿಕೊಟ್ಟು ಈ ವಿಚಾರದಲ್ಲಿ ಎಲ್ಲರೂ ಮುಖ್ಯಮಂತ್ರಿಗಳ ಪರವಾಗಿ ಗಟ್ಟಿಯಾಗಿ ನಿಲ್ಲಲು ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.