ತಮಿಳುನಾಡಿನ ಎಂ.ಕರುಣಾನಿಧಿ ಕುಟುಂಬದ ಕುಡಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ತಮಿಳುನಾಡು ಉಪಮುಖ್ಯಮಂತ್ರಿ ಯಾಗಿ ಪದೋನ್ನತಿ ಹೊಂದುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಹಾಲಿ ಯುವ ಕಲ್ಯಾಣ, ಕ್ರೀಡಾ ಅಭಿವೃದ್ಧಿ ಸಚಿವ ಆಗಿರುವ ಉದಯನಿಧಿ ಅವರನ್ನು ಆ. 22ರ ಒಳಗೆ ಡಿಸಿಎಂ ಆಗಿ ಬಡ್ತಿ ಮಾಡಲು ನಿರ್ಧರಿಸಲಾಗಿದೆ. ಏಕೆಂದರೆ ಆ ವೇಳೆ ಸ್ಟಾಲಿನ್ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮೊದಲೇ ಇದು ನಡೆಯಲಿದೆ ಎಂದು ಅವು ಹೇಳಿವೆ.
ತಂದೆಯ ಮೇಲಿನ ಹೊರೆ ಕಡಿಮೆ ಮಾಡಲು ಹಾಗೂ 2 ಹಂತದ ನಾಯಕತ್ವವನ್ನು ಬಲಪಡಿಸಲು ಉದಯನಿಧಿ ಬಡ್ತಿಗೆ ಕುಟುಂಬ ಹಾಗೂ ಪಕ್ಷದಲ್ಲೇ ಒತ್ತಾಯವಿತ್ತು. ಇದಲ್ಲದೆ 2026 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಅವರ ನೂತನ ಪಕ್ಷ ಸ್ಪರ್ಧಿಸಲಿದೆ. ಹೀಗಾಗಿ ವಿಜಯ್ ಪ್ರಭಾವವನ್ನು ಹತ್ತಿಕ್ಕಲು ನಟರೂ ಆಗಿದ್ದ ಉದಯನಿಧಿ ಚರಿಷ್ಮಾ ಅತ್ಯಗತ್ಯ ಎಂದು ಡಿಎಂಕೆ ನಾಯಕರ ಅಭಿಪ್ರಾಯ. ಅದಕ್ಕೆ ಈಗ ಉದಯನಿಧಿ ಸಮ್ಮತಿಸಿದ್ದಾರೆ ಎನ್ನಲಾಗಿದೆ. ಅಪ್ಪ-ಮಗ ಸಿಎಂ-ಡಿಸಿಎಂ ಮೊದಲಲ್ಲ, ಈ ಮುನ್ನ ಎಂ. ಕರುಣಾನಿಧಿ ತಮಿಳುನಾಡು ಸಿಎಂ ಆಗಿದ್ದಾಗ ಪುತ್ರ ಸ್ಟಾಲಿನ್ ಡಿಸಿಎಂ ಆಗಿದ್ದರು. ಅದೇ ರೀತಿ ಪಂಜಾಬ್ನಲ್ಲಿ ಅಕಾಲಿದಳ ನಾಯಕ ಪ್ರಕಾಶ ಸಿಂಗ್ ಬಾದಲ್ ಸಿಎಂ ಆಗಿದ್ದಾಗ ಪುತ್ರ ಸುಖಬೀರ್ ಬಾದಲ್ ಡಿಸಿಎಂ ಆಗಿದ್ದರು.