ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇವತ್ತು ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೋಟಿಸ್ ನೀಡಿರುವ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಿದ್ದಾರೆ. ವೈರಲ್ ವಿಡಿಯೋದಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಈಗ ಸಖತ್ ಟೆನ್ಷನ್ ಎದುರಾಗಿದೆ.
ವಿಡಿಯೋದಲ್ಲಿರುವ ಓರ್ವ ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ ಹಾಗೂ ಬೆಂಗಳೂರಿನ ಎಇಇ, ಸೇರಿ 5ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್ ಜಾರಿ ಮಾಡಿದೆ. ಸರ್ಕಾರಿ ಅಧಿಕಾರಿಗಳಿಗೆ ಎಸ್ಐಟಿ ಪೊಲೀಸರು 41A ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ವಿಡಿಯೋದಲ್ಲಿ ಇರೋದು ನೀವೇನಾ ಅಂತ ಪ್ರಶ್ನಿಸಲಾಗಿದೆ. ಒಂದು ವೇಳೆ ವಿಡಿಯೋದ ಸತ್ಯ ತನಿಖೆಯಲ್ಲಿ ಸಾಬೀತಾದ್ರೆ ಪ್ರಜ್ವಲ್ ರೇವಣ್ಣ ಅವರ ಜೊತೆಗೆ ಮಹಿಳಾ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮವಾಗುವ ಸಾಧ್ಯತೆ ಇದೆ.
ಸದ್ಯ 4 ಮಂದಿ ಸಂತ್ರಸ್ತರು ಎಸ್ಐಟಿ ಕಚೇರಿಯಲ್ಲಿದ್ದು, ನಾಲ್ಕು ಮಂದಿಗೂ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಅಷ್ಟು ಮಂದಿಗೂ ಲೈಂಗಿಕ ದೌರ್ಜನ್ಯ ಆಗಿರುವುದು ಸಾಬೀತಾಗಿದೆ ಎನ್ನಲಾಗಿದೆ. ಈಗಾಗಲೇ ನಾಲ್ಕು ಮಂದಿಯಿಂದ 164 ಹೇಳಿಕೆ ದಾಖಲಾಗಿದೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ಅಶ್ಲೀಲ ವಿಡಿಯೋ ಕೇಸ್ನಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ.
ಎಸ್ಐಟಿ ವಶದಲ್ಲಿರುವ ನಾಲ್ಕು ಮಂದಿ ಸಂತ್ರಸ್ತರಿಗೂ ಮಹಿಳಾ ಪೊಲೀಸ್ ಭದ್ರತೆ ನೀಡಲಾಗಿದೆ. ಸಂತ್ರಸ್ತ ಮಹಿಳೆಯರು ಧೈರ್ಯವಾಗಿ ಬಂದು ದೂರು ನೀಡಿದ್ರೆ ಈ ಕೇಸ್ ಮತ್ತಷ್ಟು ಬಲವಾಗುತ್ತೆ ಅನ್ನೋದು ಅಧಿಕಾರಿಗಳ ನಂಬಿಕೆಯಾಗಿದೆ.