ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧಪೀಡಿತ ಉಕ್ರೇನ್ ರಾಜಧಾನಿ ಕೀವ್ಗೆ ಮುಂದಿನ ತಿಂಗಳು ಭೇಟಿ ನೀಡುವ ಸಾಧ್ಯತೆ ಇದೆ. ರಷ್ಯಾ – ಉಕ್ರೇನ್ ಸಮರ ನಿಲ್ಲಿಸಿ, ಶಾಂತಿ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿರುವಾಗಲೇ ಮೋದಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಜು.8 ಹಾಗೂ 9ರಂದು ರಷ್ಯಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಅವರು, ಉಕ್ರೇನ್ ಬಿಕ್ಕಟ್ಟಿಗೆ ಯುದ್ಧ ಭೂಮಿಯಲ್ಲಿ ಪರಿಹಾರ ಕಂಡು ಕೊಳ್ಳಲು ಸಾಧ್ಯವಿಲ್ಲ. ಬಾಂಬ್, ಗನ್ ಹಾಗೂ ಬುಲೆಟ್ಗಳ ನಡುವೆ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ ಸ್ಪಷ್ಟವಾಗಿ ಹೇಳಿದ್ದರು.
ಆ.24ರಂದು ಉಕ್ರೇನ್ ರಾಷ್ಟ್ರೀಯ ದಿನ ಇದ್ದು ಅಂದು ಮೋದಿ ಭೇಟಿ ನೀಡುವುದಕ್ಕೆ ವ್ಯವಸ್ಥೆ ಮಾಡುವ ಸಂಬಂಧ ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. 1991ರಲ್ಲಿ ಉಕ್ರೇನ್ ದೇಶಕ್ಕೆ ಮಾನ್ಯತೆ ನೀಡಿದ ಬಳಿಕ ಈವರೆಗೂ ಅಲ್ಲಿಗೆ ಭಾರತದ ಯಾವುದೇ ಪ್ರಧಾನಿ ಭೇಟಿ ನೀಡಿಲ್ಲ. 2005ರಲ್ಲಿ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಭೇಟಿಯೇ ಆ ದೇಶಕ್ಕೆ ಭಾರತದ ನಾಯಕರೊಬ್ಬರ ಅತ್ಯುನ್ನತ ಭೇಟಿಯಾಗಿದೆ. ಇಟಲಿಯ ಅಪುಲಿಯಾದಲ್ಲಿ ಜೂ.14ರಂದು ನಡೆದಿದ್ದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಜತೆಗೆ ಮೋದಿ ಅವರು ಮಾತುಕತೆ ನಡೆಸಿದ್ದರು. ಆ ವೇಳೆ ಮೋದಿ ಅವರನ್ನು ಜೆಲೆನ್ಸ್ಕಿ ತಮ್ಮ ದೇಶಕ್ಕೆ ಆಹ್ವಾನಿಸಿದ್ದರು ಎನ್ನಲಾಗಿದೆ. ಉಕ್ರೇನ್ ಬಳಿಕ ಮೋದಿ ಪೋಲೆಂಡ್ಗೂ ತೆರಳುವ ಸಾಧ್ಯತೆ ಇದೆ. ಮೋದಿ ಅಲ್ಲಿಗೆ ಹೋಗಿದ್ದೇ ಆದಲ್ಲಿ, 4 ದಶಕಗಳ ಬಳಿಕ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗಲಿದ್ದಾರೆ.