ಪಬ್ಲಿಕ್ ಟಿವಿಯ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿದ್ದ ಶಶಿಧರ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶಶಿಧರ್ ಅವರು ಇಂದು ಸಂಜೆ ಅಕಾಲಿಕ ನಿಧನ ಹೊಂದಿದ್ದು ಪತ್ನಿ, ತಂದೆ-ತಾಯಿಯನ್ನು ಅಗಲಿದ್ದಾರೆ.
ಅರಸೀಕೆರೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದವರಾಗಿದ್ದ ಶಶಿಧರ್ ಅವರು ಸುಮಾರು 16 ವರ್ಷಗಳಿಂದ ಮಾಧ್ಯಮದಲ್ಲಿ ಸೇವೆಸಲ್ಲಿಸಿದ್ದಾರೆ. ಕಳೆದ 6 ವರ್ಷಗಳಿಂದ ಪಬ್ಲಿಕ್ ಟಿವಿ ಯ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. 40 ವರ್ಷದ ಶಶಿಧರ್ ಅವರು ಪತ್ನಿ, ತಂದೆ-ತಾಯಿಯ ಜೊತೆ ಮಾಧ್ಯಮ ಲೋಕದ ಅಪಾರ ಜನರನ್ನ ಅಗಲಿದ್ದಾರೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಆಕ್ಟಿವ್ ಜರ್ನಲಿಸ್ಟ್ ಎಂದೇ ಬಿಂಬಿತರಾಗಿದ್ದರು ಶಶೀಧರ್ ಅವರು. ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆ ತಾಲೂಕಿನ ಕಡೂರಿಗೆ ಸನಿಹವಿರುವ ಕಲ್ಲಳ್ಳಿ ಇವರ ಹುಟ್ಟೂರು. ತಂದೆ ಹೊಸಂತಪ್ಪ ಹಾಗೂ ತಾಯಿ ಸಾವಿತ್ರಮ್ಮನ ಹಿರಿಯ ಪುತ್ರನಾಗಿ ಜನಿಸಿದ ಇವರು ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನ ಪೂರ್ಣ ಗೊಳಿಸಿದರು. ಪ್ರೌಢ ಶಿಕ್ಷಣವನ್ನ ಅರಸಿಕೆರೆಯಲ್ಲಿ ಪಡೆದರು.
ಪದವಿ ಪೂರ್ಣಗೊಂಡ ನಂತರ 2006 ರಲ್ಲಿ ಎಂಎ ಜರ್ನಲಿಸಂಗೆ ಮೈಸೂರಿಗೆ ತೆರಳಿದರು. ಸ್ನಾತಕೋತ್ತರ ಪದವಿಯ ನಂತರ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಇವರು ಪ್ರಾರಂಭಿಸಿದ್ದು ಈಟಿವಿಯಲ್ಲಿ. ಈಟಿವಿಯ ವಿಜಯಪುರ ಜಿಲ್ಲೆಯ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಚಾಮರಾಜನಗರದಲ್ಲಿ ಸುವರ್ಣ ಟಿವಿಯ ವರದಿಗಾರರಾಗಿ ಸೇವೆ ಸಲ್ಲಿಸಿದರು. ಇದಾದ ಬಳಿಕ ಶಿವಮೊಗ್ಗದಲ್ಲಿ ಕಳೆದ ಆರು ವರ್ಷಗಳಿಂದ ‘ಪಬ್ಲಿಕ್ ಟಿವಿ’ಯಲ್ಲಿ ಹಿರಿಯ ಜಿಲ್ಲಾ ವರದಿಗಾರಗಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು.
ಇಂದು ಬೆಳಿಗ್ಗೆ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಬಾತ್ ರೂಂ ಗೆ ಹೋದ ಶಶಿಧರ್ ಆಕಸ್ಮಿಕವಾಗಿ ಹಿಮ್ಮುಖವಾಗಿ ಕುಸಿದು ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಮನೆಯಲ್ಲಿ ಯಾರು ಇಲ್ಲದ ಹೊತ್ತಿನಲ್ಲಿಯೇ ಈ ಘಟನೆ ನಡೆದಿದ್ದರಿಂದ ತಲೆಯಲ್ಲಿ ರಕ್ತ ಹೆಪ್ಪು ಗಟ್ಟಿತ್ತು. ತದನಂತರ ವಿಷಯ ಗೊತ್ತಾಗಿ ಶಶಿಧರ್ ರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು.
ವೈದ್ಯರು ಚಿಕಿತ್ಸೆ ಕೊಡಲು ತಯಾರಿ ಪ್ರಾರಂಭ ಮಾಡಲು ಶಶಿಧರ್ ರ ಅನಾರೋಗ್ಯದ ಸಮಸ್ಯೆ ಎದುರಾಗಿತ್ತು. ಕುಟುಂಬಸ್ಥರ ಸಹಿ ಪಡೆದು ಚಿಕಿತ್ಸೆ ಮುಂದುವರೆಸುವ ಹೊತ್ತಿಗೆ ಎಮೆರ್ಜೆನ್ಸಿಯಲ್ಲಿ ದಾಖಲಾಗಿದ್ದ ಶಶಿಧರ್ ರವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆದರೆ ಶಶಿಧರ್ ಅವರ ಅಕಾಲಿಕ ಸಾವು ಶಿವಮೊಗ್ಗ ಮಾತ್ರವಲ್ಲ ರಾಜ್ಯದ ಪತ್ರಕರ್ತರ ಪಾಲಿಗೆ ನುಂಗಲಾರದ ತುತ್ತಾಗಿದೆ. ನಾಳೆ ಹುಟ್ಟೂರಿನಲ್ಲಿ ಶಶಿಧರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.