ಪುತ್ತೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗು ಪುತ್ತೂರಿನಲ್ಲಿ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಮೃತ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿ ಅಬೂಬಕ್ಕರ್ ಸಿದ್ಧೀಕ್ ಎನ್ನುವಾತನ ಪತ್ನಿಯ ಸಹೋದರ, ಶಿವಮೊಗ್ಗದ ಮಸೀದಿಯೊಂದರ ಧರ್ಮಗುರು ಆಗಿ ಕರ್ತವ್ಯ ನಿರ್ವಹಿಸುತ್ತಿವ ಕೆಯ್ಯೂರಿನ ಉಮ್ಮರ್ ಎಂಬ ವ್ಯಕ್ತಿಯ ಮನೆಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರವೀಣ್ ಹತ್ಯೆಯ ನಂತರ ನಾಪತ್ತೆಯಾಗಿರುವ ಮೂವರು ಆರೋಪಿಗಳಾದ ಅಬೂಬಕ್ಕರ್ ಸಿದ್ದಿಕ್, ಉಮರ್ ಫಾರೂಕ್, ಮಸೂದ್ ಅಗ್ನಾಡಿ ಪೈಕಿ ಉಮ್ಮರ್ ಕೂಡ ಒಬ್ಬನಾಗಿದ್ದಾನೆ. ಇದರ ಜೊತೆಗೆ ಸುಳ್ಯದಲ್ಲೂ ಆರೋಪಿಯೋರ್ವನ ಮನೆಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿ 16 ಕಡೆ ಎನ್ ಐ ಎ ತಂಡ ದಾಳಿ ನಡೆಸಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಹುಡುಕಾಟದ ಭಾಗವಾಗಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರು, ಚೆನ್ನೈ, ಎರ್ನಾಕುಲಂ, ಕೊಡಗು ಸೇರಿ 16 ಕಡೆ ಎನ್ ಐ ಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.