ಕಾಂಗ್ರೆಸ್ ಸಂಸದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಉತ್ತರ ಪ್ರದೇಶದಲ್ಲಿ ಚಪ್ಪಲಿ ಹೊಲಿಯುವ ಚಮ್ಮಾರನ ಅಂಗಡಿಗೆ ಭೇಟಿ ನೀಡುವ ಮೂಲಕ ಮತ್ತೊಮ್ಮೆ ಗಮನಸೆಳೆದಿದ್ದಾರೆ. ಶುಕ್ರವಾರ ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿರುವ ಸಂಸದರು ಮತ್ತು ಶಾಸಕರ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಲಕ್ನೋಗೆ ತೆರಳುವ ವೇಳೆ ರಸ್ತೆ ಬದಿಯಲ್ಲಿದ್ದ ಚಮ್ಮಾರ ರಾಮ್ ಚೈತ್ ಎಂಬವರ ಅಂಗಡಿಗೆ ರಾಗಾ ದಿಢೀರ್ ಭೇಟಿ ನೀಡಿದ್ದಾರೆ. ಅಲ್ಲದೇ ಚಮ್ಮಾರನ ನಿರ್ದೇಶನದಂತೆ ಚಪ್ಪಲಿಯನ್ನು ಸರಿಪಡಿಸುವ ಪ್ರಯತ್ನವನ್ನೂ ರಾಹುಲ್ ಗಾಂಧಿ ಮಾಡಿದ್ದಾರೆ. ಚಮ್ಮಾರ ರಾಮ್ ಚೈತ್ ಈ ಅಂಗಡಿಯಲ್ಲಿ ಕಳೆದ 40 ವರ್ಷಗಳಿಂದ ಪಾದರಕ್ಷೆಗಳನ್ನು ತಯಾರಿಸುತ್ತಿದ್ದಾರೆ.
ರಾಹುಲ್ ಗಾಂಧಿ ಈ ಅಂಗಡಿಯಲ್ಲಿ ಸುಮಾರು 30 ನಿಮಿಷಗಳ ಕಾಲ ರಾಮ್ ಚೈತ್ ಜೊತೆ ಕಾಲ ಕಳೆದು ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕಷ್ಟಸುಖಗಳನ್ನೂ ಆಲಿಸಿದ್ದಾರೆ. ಇದಾದ ಬಳಿಕ ಇಬ್ಬರೂ ಪಾನೀಯ ಸೇವಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ರಾಮ್ ಚೈತ್ ಅವರ ಸಮಸ್ಯೆಗಳನ್ನು ಪರಿಹರಿಸಲು ಬೇಕಾಗುವ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಮ್ ಚೈತ್, ನಾನು ರಾಹುಲ್ ಅವರೊಂದಿಗೆ ನನ್ನ ಕೆಲಸದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದೇನೆ ಮತ್ತು ಅವರಿಂದ ನನ್ನ ಕುಟುಂಬಕ್ಕೆ ಹಣಕಾಸಿನ ನೆರವು ಕೋರಿದ್ದೇನೆ ಎಂದು ತಿಳಿಸಿದ್ದಾರೆ. ಮಾತ್ರವಲ್ಲದೇ ಅಂಗಡಿಗೆ ಭೇಟಿ ನೀಡಿದ ಸಂದರ್ಭ ಪಾದರಕ್ಷೆಗಳನ್ನು ಸರಿಪಡಿಸುವ ವಿಧಾನವನ್ನು ಕಲಿತುಕೊಂಡು ಚಪ್ಪಲಿಯನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ ಎಂದರು. ಇಷ್ಟು ಮಾತ್ರವಲ್ಲದೇ ವೃತ್ತಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆಯೂ ಚರ್ಚಿಸಿರುವುದಾಗಿ ರಾಮ್ ಚೈತ್ ತಿಳಿಸಿದ್ದಾರೆ.