ಮುಂಜಾನೆ ಮೂವರ ಮೇಲೆ ದಾಳಿ ನಡೆಸಿ ಮರೆಯಾಗಿದ್ದ ಚಿರತೆಯ ಜಾಡು ಹಿಡಿದು ಹೊರಟ ಗ್ರಾಮಸ್ಥರು, ಅದನ್ನು ಪತ್ತೆ ಹಚ್ಚಿ, ಆ ಚಿರತೆಯನ್ನು ಹೊಡೆದು ಸಾಯಿಸಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ನಡೆದಿದೆ. ಗುಡ್ಡದ ಪಕ್ಕದಲ್ಲಿರುವ ಮನೆಯೊಂದರ ಬಾಲಕ ಬೆಳಗ್ಗೆ ಬಹಿರ್ದೆಸೆಗೆ ಹೋದಾಗ ಚಿರತೆ ಕಂಡು, ಹೆದರಿ, ಮನೆಗೆ ಬಂದು ಪಾಲಕರಿಗೆ ತಿಳಿಸಿದ್ದ. ಪಾಲಕರು ಸ್ಥಳಕ್ಕೆ ತೆರಳಿದ ವೇಳೆ ಗಲಾಟೆಯಿಂದ ಬೆದರಿದ ಚಿರತೆ ಮೂವರ ಮೇಲೆ ದಾಳಿ ನಡೆಸಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಚಿರತೆಯ ಜಾಡು ಕಂಡು ಹಿಡಿದು, ಅದನ್ನು ಪತ್ತೆ ಹಚ್ಚಿ, ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು, ಕ್ರಮ ಜರುಗಿಸಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.