ಕೊಡಗು, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಶನಿವಾರ ಐವರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್ನ ಬೋಜಗಾರ ಗಲ್ಲಿಯಲ್ಲಿ ಮನೆಗೆ ಘಟಪ್ರಭಾ ನದಿಯ ನೀರು ನುಗ್ಗಿದ್ದನ್ನು ಕಂಡು ಹೃದಯಾಘಾತಕ್ಕೊಳಗಾಗಿ ಮನೆಯ ಮಾಲೀಕ ದಶರಥ ಬಂಢಿ (72) ಎಂಬುವರು ಸಾವನ್ನಪ್ಪಿದ್ದಾರೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ಕುಮದ್ವತಿ ನದಿಗೆ ಬಿದ್ದು ವೃದ್ಧೆಯೊಬ್ಬಳು ಅಸುನೀಗಿದ್ದಾಳೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರಿನಲ್ಲಿ ಮೇವು ತರಲು ಹೊಲಕ್ಕೆ ಹೋದ ಸಿದ್ದಪ್ಪ ಅಡೊಳ್ಳಿ (65) ಎಂಬುವರು ಹಿನ್ನೀರು ಪ್ರದೇಶದಲ್ಲಿ ನಾಪತ್ತೆಯಾಗಿದ್ದು, ನೀರಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಇದೇವೇಳೆ, ಧಾರವಾಡ ತಾಲೂಕಿನ ವೆಂಕಟಾಪುರದಲ್ಲಿ ಮನೆಯ ಗೋಡೆ ಕುಸಿದು ಯಲ್ಲಪ್ಪ (62) ಎಂಬುವರು ಅಸುನೀಗಿದ್ದಾರೆ. ಮಣ್ಣಿನ ಅವಶೇಷಗಳಡಿ ಸಿಲುಕಿದ್ದ ಅವರ ಪತ್ನಿ ಮತ್ತವರ ಮಗಳನ್ನು ರಕ್ಷಿಸಲಾಗಿದೆ. ಈ ಮಧ್ಯೆ, ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಜು.19ರಂದು ಮನೆಯ ಚಾವಣಿ ಕುಸಿದು ಗಾಯಗೊಂಡಿದ್ದ ಯಲ್ಲವ್ವ ದೊಡ್ಡಬಸಪ್ಪ ಹರಕುಣಿ (60) ಎಂಬುವರು ಚಿಕಿತ್ಸೆ ಫಲಿಸದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.