ರಾಜ್ಯದ ವಿವಿಧೆಡೆ ಶನಿವಾರದಿಂದ ನಾಲ್ಕು ದಿನಗಳು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಾವಣಗೆರೆ, ಚಿತ್ರದುರ್ಗ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಶನಿವಾರ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾನುವಾರ ಮಳೆ ವ್ಯಾಪಿಸಿಕೊಳ್ಳುವ ಸಂಭವವಿದ್ದು, 11 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಯ ಜತೆಗೆ ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದೆಡೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಎರಡು ದಿನಗಳು ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಯ ಹಲವೆಡೆ ಇದೇ 10ರವರೆಗೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ದಸರಾಗೆ ಮಳೆಯ ಸಿಂಚನ ಮೈಸೂರು: ನಗರದಲ್ಲಿ ಶುಕ್ರವಾರ ಸಂಜೆ ಮಳೆ ಸುರಿದು, ದಸರಾ ಸಂಭ್ರಮಕ್ಕೆ ತಂಪೆರೆಯಿತು. ಸಿದ್ದಾರ್ಥನಗರ, ನಗರ ಹೊರ ವಲಯದ ಉತ್ತನಹಳ್ಳಿ ಸುತ್ತಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಯಿತು. ಸಂಜೆ ನಾಲ್ಕು ಗಂಟೆ ವೇಳೆಗೆ ಮೋಡಗಳು ದಟ್ಟೈಸಿ ದಿಢೀರನೆ ಸುರಿಯತೊಡಗಿದ ಮಳೆಯಿಂದ ರಸ್ತೆಯಲ್ಲಿದ್ದವರು ವಿಚಲಿತರಾದರು. ಮಳೆ ನಿಲ್ಲುವವರೆಗೂ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ನಗರದ ಒಳಪ್ರದೇಶಗಳಲ್ಲಿ ನಿರಂತರವಾಗಿ ಸಾಧಾರಣ ಮಳೆಯಾಯಿತು. ರಾತ್ರಿ 8.30ರ ನಂತರ ಮತ್ತೆ ತುಂತುರು ಮಳೆ ಸುರಿಯಿತು.