ರಾಜಸ್ಥಾನದಿಂದ ಸರಬರಾಜಾಗುತ್ತಿದ್ದ ಮಾಂಸವು ಕುರಿಯದ್ದೇ ಆಗಿದೆ ಎಂಬುದನ್ನು ಪ್ರಯೋಗಾಲಯವು ಖಚಿತಪಡಿಸಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಖಚಿತಪಡಿಸಿದ್ದಾರೆ. ಈ ಬಗ್ಗೆ ಲ್ಯಾಬ್ ವರದಿ ಬಹಿರಂಗಪಡಿಸಿರುವ ಸಚಿವರು “ರಾಜಸ್ಥಾನದಿಂದ ಸರಬರಾಜಾಗುತ್ತಿದ್ದ ಮಾಂಸದ ಕುರಿತಾದ ಘಟನೆಗಳ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಬಂದಿದ್ದ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯಗಳಿಂದ ಪರೀಕ್ಷಾ ವರದಿ ಬಂದಿದ್ದು, ರಾಜಸ್ಥಾನದಿಂದ ಬಂದ ಮಾಂಸವು ಕುರಿಯದ್ದೇ ಆಗಿದೆ ಎಂಬುದನ್ನು ಪ್ರಯೋಗಾಲಯವು ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅನಗತ್ಯ ಗೊಂದಲ ಸೃಷ್ಟಿಸದಂತೆ ಮತ್ತು ಈ ಕುರಿತ ಗಾಳಿ ಸುದ್ದಿಗಳಿಗೆ ಕಿವಿಗೊಡದಂತೆ ನಾನು ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ” ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಜುಲೈ 26ರಂದು ನಾಯಿ ಮಾಂಸ ಸಾಗಣೆ ಸಾಗಾಣೆ ಮಾಡಲಾಗುತ್ತಿದೆ ಎಂದು ಹಿಂದುತ್ವ ಸಂಘಟನೆಗಳ ಕೆಲವರು ವಿವಾದ ಸೃಷ್ಟಿಸಿದ್ದರು. ಜೈಪುರದಿಂದ ರೈಲಿನಲ್ಲಿ ಬಂದ ಸುಮಾರು 2,700 ಕೆಜಿ ಮಾಂಸವನ್ನು ಹೊಂದಿದ್ದ 90 ಇನ್ಸುಲೇಟೆಡ್ ಬಾಕ್ಸ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ರೈಲು ನಿಲ್ದಾಣದಲ್ಲಿ ಜಮಾಯಿಸಿದ ಕಾರ್ಯಕರ್ತರು, ನಾಯಿ ಮಾಂಸ ಸಾಗಾಟವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.