ರಾಮನಗರ, ಚನ್ನಪಟ್ಟಣದ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿ ಘೋಷಣೆ ವಿಚಾರವಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಮಾತನಾಡಿದ್ದು, ಮೈತ್ರಿ ಪಕ್ಷದಿಂದ ನಾನೇ ಅಭ್ಯರ್ಥಿ ಎಂದಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ನಾನು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದೆ. ಆದಷ್ಟು ಬೇಗ ಅಭ್ಯರ್ಥಿ ಹೆಸರು ಸೂಚಿಸುವಂತೆ ಕೇಳಿದ್ದೇನೆ. ಈಗಾಗಲೇ ಕಾಂಗ್ರೆಸ್ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಹಾಗಾಗಿ ಮೈತ್ರಿ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ. ಕುಮಾರಸ್ವಾಮಿ ಅವರು ನನ್ನನ್ನೇ ನಿಲ್ಲುವಂತೆ ಹೇಳಿದ್ದಾರೆ. ಅದಕ್ಕೆ ಅಧಿಕೃತ ಅನುಮೋದನೆ ಅವರೇ ಕೊಡಬೇಕು. ಮೈತ್ರಿ ಪಕ್ಷದ ವರಿಷ್ಠರು ಅಧಿಕೃತ ಘೋಷಣೆ ಮಾಡಬೇಕು. ಹಾಗಾಗಿ ನೀವೇ ಬಂದು ಹೆಸರು ಘೋಷಣೆ ಮಾಡಿ ಎಂದು ಅವರನ್ನೇ ಕೇಳಿದ್ದೇನೆ ಎಂದರು.
ಕಾಂಗ್ರೆಸ್ನವರು ಸರ್ಕಾರದ ಹಣದಲ್ಲಿ ಉಪಚುನಾವಣೆ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಕನಕಪುರದಿಂದ ಗೆದ್ದು ರಾಮನಗರ ಉಸ್ತುವಾರಿ ತೆಗೆದುಕೊಳ್ಳದೇ ಬೆಂಗಳೂರು ಉಸ್ತುವಾರಿ ತೆಗೆದುಕೊಂಡಿರುವುದು ಯಾಕೆ?. ಈಗ ಚುನಾವಣೆ ಸಮಯದಲ್ಲಿ ಮಾತ್ರ ಚನ್ನಪಟ್ಟಣ ನೆನಪಾಗಿರೋದಾ? ಚನ್ನಪಟ್ಟಣ ಜನ ಬುದ್ಧಿವಂತರಿದ್ದಾರೆ. ಇಂತಹ ನಾಟಕಗಳಿಗೆ ನಮ್ಮ ಜನ ಉತ್ತರ ಕೊಡುತ್ತಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಸಿಪಿವೈ ವ್ಯಂಗ್ಯವಾಡಿದ್ದಾರೆ.
ಕಳೆದ ವಾರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮೂರು ದಿನ ಜನಸ್ಪಂದನಾ ಕಾರ್ಯಕ್ರಮ ಮಾಡಿದ್ದಾರೆ. ಉಪಚುನಾವಣೆ ದೃಷ್ಟಿಯಲ್ಲಿ ಮಾಡಿರುವ ಸರ್ಕಾರಿ ಸಂತೆ ಅದು. ಯಾವುದೇ ಗುರಿ ಇಲ್ಲದೇ, ಯೋಜನೆ ಇಲ್ಲದೇ ಮಾಡಿರುವ ಕಾರ್ಯಕ್ರಮ. ಅಧಿಕಾರಿಗಳನ್ನು ಚನ್ನಪಟ್ಟಣಕ್ಕೆ ಕರೆತಂದು ಹೆದರಿಸಿ ಜನರಿಗೆ ಆಸೆ ತೋರಿಸುವ ಕೆಲಸ ಮಾಡಿದ್ದಾರೆ. ಕಳೆದ ಒಂದು ಕಾಲು ವರ್ಷದ ಅವಧಿಯಲ್ಲಿ ಸರ್ಕಾರ ಸಾರ್ವಜನಿಕರಿಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಸರ್ಕಾರ ಬಂದಾಗಿನಿಂದಲೂ ಚನ್ನಪಟ್ಟಣಕ್ಕೆ ಬಂದಿರಲಿಲ್ಲ. ಈಗ ಚನ್ನಪಟ್ಟಣ ಖಾಲಿ ಇದೆ, ಬಂದಿದ್ದೇನೆ ಅಂತ ಸುಳ್ಳು ಹೇಳುತ್ತಿದ್ದಾರೆ. ಜನರಿಗೆ ಮನೆ ಕೊಡುತ್ತೇನೆ. ಸೈಟ್ ಕೊಡುತ್ತೇನೆ ಅಂತ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಪಿವೈ ಕಿಡಿಕಾರಿದ್ದಾರೆ.