- ಯಾರು ಏನೇ ಟೀಕೆ ಮಾಡಲಿ, ಚನ್ನಪಟ್ಟಣದ ಋಣ ತೀರಿಸುತ್ತೇನೆ
- ಜನರ ಸಮಸ್ಯೆಗೆ ಪರಿಹಾರ ನೀಡುವುದಷ್ಟೇ ಮುಖ್ಯ
ಚನ್ನಪಟ್ಟಣ: “ಯಾರು ಏನೇ ಟೀಕೆ ಮಾಡಲಿ. ನಾನು ಚನ್ನಪಟ್ಟಣ ಕ್ಷೇತ್ರದ ಜನರ ಋಣ ತೀರಿಸುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಎಂದು ಹೇಳಿದರು.
ಸರ್ಕಾರದ ವತಿಯಿಂದ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಸೋಮವಾರ ಜನರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, “ಇಲ್ಲಿ ಬಂದಿರುವ ಸಾವಿರಾರು ಜನ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅರ್ಜಿ ಸಲ್ಲಿಸಲು ಮುಗಿ ಬೀಳುತ್ತಿರುವುದನ್ನು ನೋಡಿದರೆ, ಅವರ ಪರಿಸ್ಥಿತಿ ಅರ್ಥವಾಗುತ್ತದೆ. ನನ್ನ ಬಗ್ಗೆ ಯಾರು ಏನೇ ಟೀಕೆ ಮಾಡಲಿ, ನನಗೆ ಈ ಜನರ ಸಮಸ್ಯೆಗೆ ಪರಿಹಾರ ನೀಡುವುದಷ್ಟೇ ಮುಖ್ಯ. ಈ ಹಿಂದೆ ನಾನು ಈ ಭಾಗದ ಶಾಸಕನಾಗಿದ್ದಾಗಲೂ ಅಧಿಕಾರಿಗಳನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದೆ. ಈಗಲೂ ಅದೇ ಕೆಲಸ ಮುಂದುವರಿಸುತ್ತಿದ್ದೇನೆ ಎಂದರು.
ಈ ಹಿಂದೆ ಇದ್ದ ಜನಪ್ರತಿನಿಧಿಗಳು ಈ ಕೆಲಸ ಮಾಡಬಹುದಾಗಿತ್ತು. ಆದರೆ ಮಾಡಲಿಲ್ಲ. ಯಾಕೆ ಮಾಡಲಿಲ್ಲ ಎಂದು ನಾನು ಪ್ರಶ್ನೆ ಮಾಡುವುದಿಲ್ಲ. ಕೆಲ ದಿನಗಳ ಹಿಂದೆ ತಾಲ್ಲೂಕಿನ ಅಧಿಕಾರಿಗಳ ಸಭೆ ಮಾಡಿದೆ. ಆಗ ನನ್ನ ಗಮನಕ್ಕೆ ಒಂದಷ್ಟು ವಿಚಾರಗಳು ಬಂದವು. ಕಳೆದ ಐದು ವರ್ಷಗಳಲ್ಲಿ ತಾಲ್ಲೂಕಿನ ಬಡವರಿಗೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ. ಯಾರೊಬ್ಬರಿಗೂ ಬಗರ್ ಹುಕಂ ಸಾಗುವಳಿ ಜಮೀನು ನೀಡಿಲ್ಲ. ಆಶ್ರಯ ಸಮಿತಿ ಸಭೆ ಕೂಡ ಮಾಡಿಲ್ಲ ಎಂಬ ವಿಚಾರ ತಿಳಿಯಿತು. ಈ ಹಿಂದೆ ಇದ್ದವರು ಯಾಕೆ ಮಾಡಲಿಲ್ಲ ಎಂದು ಈಗ ನಾನು ಪ್ರಶ್ನೆ ಮಾಡುವುದಿಲ್ಲ. ಬಡವರ ಬದುಕಲ್ಲಿ ಬದಲಾವಣೆ ತರಲಿಲ್ಲ ಎಂದರೆ ನಾವು ಜನಪ್ರತಿನಿಧಿಯಾಗಿ ಯಾಕೆ ಇರಬೇಕು? ಇಂತಹ ಕಾರ್ಯಕ್ರಮ ಮಾಡಿ ಜನರ ಕಷ್ಟ ಆಲಿಸಬೇಡಿ ಎಂದು ಅವರಿಗೆ ನಾವೇನಾದರೂ ಹೇಳಿದ್ದೆವಾ? ನೀವೇನಾದರೂ ಹೇಳಿದ್ದೀರಾ? ಎಂದು ಹೇಳಿದರು.
ಯಾರಿಗೆ ನಿವೇಶನವಿಲ್ಲ ಆಯಾ ಊರುಗಳಲ್ಲಿ ಸರ್ಕಾರ 2-3 ಎಕರೆ ಜಮೀನು ಖರೀದಿಸಿ ಲೇಔಟ್ ಮಾಡಿ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಬಿಸಿಲಮ್ಮ ದೇವಾಲಯದ ಆವರಣದಲ್ಲಿ ನಿಂತು ಹೇಳುತ್ತಿದ್ದೇನೆ. ಚನ್ನಪಟ್ಟಣದ ಬಡವರಿಗೆ ನಿವೇಶನ ನೀಡಲು 50 ಕೋಟಿ ಹಣ ತಂದು 50-100 ಎಕರೆ ಜಾಗದಲ್ಲಿ ಲೇಔಟ್ ಮಾಡುತ್ತೇವೆ. ಬಡವರಿಗೆ ಮನೆ ಕಟ್ಟಿಕೊಡಲಾಗುವುದು. ಮುಂದೆ ಇಲ್ಲಿ ನಮ್ಮ ಶಾಸಕರು ಆಯ್ಕೆಯಾಗುತ್ತಾರೆ ಕನಿಷ್ಠ 10 ಸಾವಿರ ಜನರಿಗೆ ನಿವೇಶನ ಹಂಚಿಕೆ ಮಾಡುತ್ತೇವೆ. ಈ ತಾಲ್ಲೂಕಿನ 94% ಅಂದರೆ ಸುಮಾರು 64 ಸಾವಿರ ಬಡ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. ಇನ್ನು 7-8 % ಫಲಾನುಭವಿಗಳಿಗೆ ತಲುಪಬೇಕಿದೆ. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಪಂಚಾಯ್ತಿಯ 12 ಸಾವಿರ ಕುಟುಂಬಗಳಿಗೆ ಅರ್ಜಿಯನ್ನು ತಲುಪಿಸಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.