4 ವರ್ಷದ ಬಾಲಕಿಯನ್ನು ಸಂಬಂಧಿಯೇ ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಗುವಿನ ಶವವು ತಿಪ್ಪಗೊಂಡನಹಳ್ಳಿ ಬಳಿ ಸೋಮವಾರ ರಾತ್ರಿ ಪತ್ತೆಯಾಗಿದೆ. ಆರೋಪಿ ಬೆಂಗಳೂರಿನ ಗೌರಿಪಾಳ್ಯದ ಇಮ್ರಾನ್ ಖಾನ್ ವಿರುದ್ಧ ಮಾಗಡಿ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಸಂತ್ರಸ್ತ ಮಗುವಿನ ಕುಟುಂಬದ ಸಂಬಂಧಿಯಾದ ಆರೋಪಿ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಜುಲೈ 20ಕ್ಕೆ ಬಂದಿದ್ದ ಆತ, ಕೊಲೆಯಾಗಿರುವ ಹೆಣ್ಣು ಮಗುವಿನ ಜೊತೆಗೆ ಮತ್ತೊಂದು ಮಗುವನ್ನು ಸಂಜೆ ಅಂಗಡಿಗೆ ಕರೆದೊಯ್ದು ಐಸ್ಕ್ರೀಂ ಕೊಡಿಸಿಕೊಂಡು ಬಂದಿದ್ದ. ನಂತರ ಮತ್ತೆ ಹೆಣ್ಣು ಮಗುವನ್ನು ತನ್ನೊಂದಿಗೆ ಕರೆದೊಯ್ದಿದ್ದ ಎಂದು ಪೊಲೀಸರು ತಿಳಿಸಿದರು.
ಸಂಜೆ 7 ಗಂಟೆಯಾದರೂ ಮಗು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ, ತಾಯಿ ಅಕ್ಕಪಕ್ಕ ಹುಡುಕಾಡಿದರು. ಕಡೆಗೆ, ಅಂಗಡಿಗೆ ಮಗು ಕರೆದೊಯ್ದಿದ್ದ ಆರೋಪಿಗೆ ಕರೆ ಮಾಡಿದಾಗ ಆತ, ‘ನನಗೇನೂ ಗೊತ್ತಿಲ್ಲ’ ಎಂದು ಕರೆ ಸ್ಥಗಿತಗೊಳಿಸಿ, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಅನುಮಾನಗೊಂಡ ತಾಯಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ಮಗು ಹಾಗೂ ಆರೋಪಿಗಾಗಿ ಹುಡುಕಾಟ ನಡೆಸಿದ್ದೆವು ಎಂದು ಹೇಳಿದರು.