ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರು ಪರಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ . ಹಾಗಂದ ಮಾತ್ರಕ್ಕೆ ಅವರಿಗೆ ಕನ್ನಡದ ಬಗ್ಗೆ ಇರುವ ಪ್ರೀತಿ ಕಡಿಮೆ ಆಗಿಲ್ಲ. ಅವರು ಎಲ್ಲ ಕಡೆಗಳಲ್ಲಿ ಕನ್ನಡದ ಕಂಪನ್ನು ಹರಡುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಟಾಲಿವುಡ್ನ ಖ್ಯಾತ ನಟ ರಾನಾ ದಗ್ಗುಬಾಟಿ ಅವರಿಗೆ ರಿಷಬ್ ಶೆಟ್ಟಿ ಅವರು ಕನ್ನಡ ಕಲಿಸಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಸ್ವತಃ ರಾನಾ ಅವರೇ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಅಮೇಜಾನ್ ಪ್ರೈಮ್ ವಿಡಿಯೋಗಾಗಿ ರಾನಾ ದಗ್ಗುಬಾಟಿ ಅವರು ಶೋ ಮಾಡುತ್ತಿದ್ದಾರೆ. ‘ದಿ ರಾನಾ ದಗ್ಗುಬಾಟಿ ಶೋ’ ಎಂಬ ಹೆಸರನ್ನೇ ಇದಕ್ಕೆ ಇಟ್ಟಿದ್ದಾರೆ. ಇಷ್ಟು ದಿನ ಸ್ಟುಡಿಯೋದಲ್ಲಿ ಕುಳಿತು ಈ ಶೋನ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ರಾನಾ ಅವರು ತಮ್ಮ ತಂಡವನ್ನು ಕರೆದುಕೊಂಡು ಕುಂದಾಪುರಕ್ಕೆ ಬಂದಿದ್ದಾರೆ. ಇಲ್ಲಿ ಶೋನ ಶೂಟ್ ಮಾಡಲಾಗಿದೆ. ರಾನಾ ಜೊತೆ ನೇಹಾ ಶೆಟ್ಟಿ ಕೂಡ ಇದ್ದರು. ‘ಸಿನಿಮಾ ಕೆಲಸ ಮಾಡಬೇಕು ಎಂದರೆ ನಗರಕ್ಕೆ ಬರಬೇಕು. ಆದರೆ, ಇದನ್ನು ಸುಳ್ಳು ಮಾಡಿದವರು ರಿಷಬ್’ ಎಂದಿದ್ದಾರೆ ರಾಣಾ. ‘ಕಾಂತಾರ: ಚಾಪ್ಟರ್ 1’ ಚಿತ್ರದ ಸಂಪೂರ್ಣ ಶೂಟಿಂಗ್ ಕುಂದಾಪುರದ ಸುತ್ತಮುತ್ತ ನಡೆಯುತ್ತಿದೆ. ಈ ಕಾರಣದಿಂದಲೇ ರಿಷಬ್ ಅವರು ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ. ಇದು ರಾಣಾಗೆ ಖುಷಿ ನೀಡಿದೆ. ರಾಣಾ ಅವರು ಅಲ್ಲಿನ ಸರ್ಕಾರಿ ಶಾಲೆಗೆ ತೆರಳಿ ಕನ್ನಡ ಕಲಿತಿದ್ದಾರೆ. ರಾಜ್ಕುಮಾರ್ ಹೇಳಿದ್ದ ‘ಹೇಳು ಪಾರ್ಥ..’ ಡೈಲಾಗ್ನ ರಿಷಬ್ ಅವರು ರಾಣಾಗೆ ಹೇಳಿಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ರಾಣಾ ಅವರು ಎಲ್ಲಾ ಭಾಷೆಗಳನ್ನು ಗೌರವಿಸುತ್ತಾರೆ. ಭಾಷಾ ಇತಿಮಿತಿ ಇರಬಾರದು ಎಂದು ನಂಬಿದವರು ಅವರು. ಈ ಕಾರಣದಿಂದಲೇ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಈಗ ಅವರು ಕನ್ನಡ ಕಲಿಯುವ ಪ್ರಯತ್ನ ಮಾಡುವ ಮೂಲಕ, ಕನ್ನಡದ ಡೈಲಾಗ್ ಹೇಳುವ ಮೂಲಕ ಈ ಭಾಷೆಯ ಮೇಲೆ ಇರುವ ಗೌರವ ಹಾಗೂ ಪ್ರೀತಿಯನ್ನು ಹೊರಹಾಕಿದ್ದಾರೆ.