2025 ರ ಐಪಿಎಲ್ ಮೆಗಾ ಹರಾಜು ಇದೇ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ಅಂತಿಮಗೊಳಿಸಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ಪ್ರತಿ ಹರಾಜಿನಲ್ಲೂ ಸ್ಟಾರ್ ಆಟಗಾರರ ದಂಡನ್ನೇ ಕಟ್ಟಿಕೊಂಡು ಅಖಾಡಕ್ಕಿಳಿಯುವ ಈ ರೆಡ್ ಆರ್ಮಿಗೆ ಮಾತ್ರ ಇದುವರೆಗೂ ಐಪಿಎಲ್ ಟ್ರೋಫಿ ಎಂಬುದು ಗಗನ ಕುಸುಮವಾಗಿದೆ. ಹೀಗಾಗಿ ಈ ಬಾರಿಯಾದರೂ ಸಮತೋಲಿತ ತಂಡವನ್ನು ಆರ್ಸಿಬಿ ಕಟ್ಟಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ. ಈ ನಡುವೆ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿರುವ ಆರ್ಸಿಬಿ, ಮುಂಬೈ ತಂಡವನ್ನು ರಣಜಿ ಚಾಂಪಿಯನ್ ಮಾಡಿದ್ದ ಓಂಕಾರ್ ಸಾಲ್ವಿ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ ಎಂದು ವರದಿಯಾಗಿದೆ.
ಓಂಕಾರ್ ಸಾಲ್ವಿ ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಅವರ ಕೋಚಿಂಗ್ನಲ್ಲಿ ಮುಂಬೈ 2023-24ರ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಟೈಮ್ಸ್ ಆಫ್ ಇಂಡಿಯಾದ ಸುದ್ದಿಯ ಪ್ರಕಾರ, ಇದೀಗ ಆರ್ಸಿಬಿ ಬಳಗವನ್ನು ಸೇರಿಕೊಂಡಿರುವ ಓಂಕಾರ್, ದೇಶೀಯ ಸೀಸನ್ ಮುಗಿದ ಬಳಿಕ ಅಧಿಕೃತವಾಗಿ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಓಂಕಾರ್ ಈ ಹಿಂದೆ ಐಪಿಎಲ್ನಲ್ಲಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದು, ಅವರು ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚಿಂಗ್ ಯೂನಿಟ್ನಲ್ಲಿದ್ದರು.
ಓಂಕಾರ್ ಸಾಲ್ವಿ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ… ಸಾಲ್ವಿ ಅವರಿಗೆ ಆಟಗಾರನಾಗಿ ಹೆಚ್ಚಿನ ಅನುಭವವಿಲ್ಲ. ಅವರು 2005 ರಲ್ಲಿ ರೈಲ್ವೇಸ್ ಪರವಾಗಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದರು. ಅಲ್ಲದೆ ಅವರು ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆದಿದ್ದಾರೆ. ಆದರೆ ಅವರು ಆಟಗಾರನಾಗಿ ಹೆಚ್ಚು ಪ್ರಸಿದ್ಧರಾಗದಿದ್ದರೂ, ಕೋಚ್ ಆಗಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಈ ವರ್ಷವೂ ಅವರ ಕೋಚಿಂಗ್ ಅಡಿಯಲ್ಲಿ ಮುಂಬೈ, ರಣಜಿ ಟ್ರೋಫಿಯ ಎಲೈಟ್ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿರುವ 5 ಪಂದ್ಯಗಳಲ್ಲಿ ತಂಡ 22 ಅಂಕ ಗಳಿಸಿದೆ.