ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಗಂಭೀರ ಪ್ರಕರಣ ಆದ್ದರಿಂದ ಜಾಮೀನು ಸಿಗುವುದು ಅಷ್ಟು ಸುಲಭವಿಲ್ಲ. ಬೇಲ್ ಪಡೆಯಲು ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ದಾರೆ. ಆದರೆ ಎರಡನೇ ಬಾರಿಗೆ ಅವರ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ. ಆಗಸ್ಟ್ 27ಕ್ಕೆ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಪವಿತ್ರಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿ ನ್ಯಾಯಾಧೀಶ ಜೈಶಂಕರ್ ಅವರು ಆದೇಶ ನೀಡಿದ್ದಾರೆ. ಹಾಗಾಗಿ ಇನ್ನಷ್ಟು ದಿನಗಳ ಕಾಲ ಪವಿತ್ರಾ ಗೌಡ ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯ ಆಗಿದೆ.
ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಎಸ್ಪಿಪಿ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನನ್ನು ಬೆಂಗಳೂರಿನಲ್ಲಿ ಕೊಲೆ ಮಾಡಿಸಿದ ಆರೋಪ ಪವಿತ್ರಾ ಗೌಡ ಅವರ ಮೇಲಿದೆ. ಈ ಕೇಸ್ನಲ್ಲಿ ನಟ ದರ್ಶನ್ ಕೂಡ ಪ್ರಮುಖ ಆರೋಪಿ. ಇವರೆಲ್ಲರೂ ಪ್ರಭಾವಿ ವ್ಯಕ್ತಿಗಳಾದ ಕಾರಣ ಒಂದು ವೇಳೆ ಜಾಮೀನು ಸಿಕ್ಕರೆ ಸಾಕ್ಷಿ ನಾಶಕ್ಕೆ ಪ್ರಯತ್ನಿಸುವ ಸಾಧ್ಯತೆ ಇದೆ. ಹಾಗಾಗಿ ಜಾಮೀನು ನೀಡದಂತೆ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ.