- ನಟ ದರ್ಶನ್ಗು ಕಾನೂನು ಒಂದೇ, ಪರಮೇಶ್ವರ್ಗು ಕಾನೂನುಒಂದೇ
- ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು’ ಎಂದ ಗೃಹ ಸಚಿವ ಡಾ. ಜಿ.ಪರಮೇಶ್ವರ
ಬೆಂಗಳೂರು : ‘ಎಲ್ಲರಿಗೂ ಕಾನೂನು ಒಂದೇ. ನಟ ದರ್ಶನ್ಗು ಕಾನೂನು ಒಂದೇ, ಪರಮೇಶ್ವರ್ಗು ಒಂದೇ ಕಾನೂನು. ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು’ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಟ ದರ್ಶನ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ತನಿಖೆಯಲ್ಲಿ ಬರುವ ಅಂಶಗಳನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.
ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಅವರ ಆಪ್ತೆ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ದರ್ಶನ್ ದೂರು ಕೊಡಬಹುದಾಗಿತ್ತು. ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳುತ್ತಿದ್ದರು. ಅದನ್ನು ಬಿಟ್ಟು, ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಹೊಡೆದು ಸಾಯಿಸಿದ್ದಾರೆ ಎಂಬ ಮಾಹಿತಿ ಇದೆ. ದೂರು ಕೊಟ್ಟಿದ್ದರೆ ಇದೆಲ್ಲವನ್ನು ತಡೆಯಲು ಅವಕಾಶವಿತ್ತು. ಆದರೆ, ಘಟನೆ ನಡೆದು ಹೋಗಿದೆ. ಯಾರು ಏನು ಮಾಡುವುದಕ್ಕೆ ಆಗುವುದಿಲ್ಲ. ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಇಲಾಖೆ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ನಟ ದರ್ಶನ್ ಪ್ರಕರಣದಿಂದ ಬಚಾವ್ ಆಗಲು ಪ್ರಭಾವಿ ರಾಜಕಾರಣಿಯಿಂದ ಪ್ರಯತ್ನ ಮಾಡಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನನಗೆ ಗೊತ್ತಿರುವಂತೆ ಯಾರು ಸಹ ಪ್ರಯತ್ನ ಮಾಡಿಲ್ಲ. ಕಾನೂನಿನಲ್ಲಿ ಏನೆಲ್ಲ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಅದನ್ನು ಪೊಲೀಸರು ಮಾಡುತ್ತಾರೆ. ಇದರಲ್ಲಿ ಸರ್ಕಾರದಿಂದ ನಾವ್ಯಾರು ಮಧ್ಯ ಪ್ರವೇಶಿಸುವುದಿಲ್ಲ. ಮುಕ್ತವಾಗಿ ತನಿಖೆ ನಡೆಸಲು ಪೊಲೀಸರಿಗೆ ಅವಕಾಶವಿದೆ ಎಂದು ಹೇಳಿದರು.