ತಮಿಳುನಾಡು ರಾಜಧಾನಿ ಚೆನ್ನೈ ಮೂಲದ ಸ್ಟಾರ್ಟಪ್ ಕಂಪನಿಯೊಂದು ಮರುಬಳಕೆಯ ಹೈಬ್ರಿಡ್ ರಾಕೆಟ್ ಅನ್ನು ಶನಿವಾರ ಉಡಾವಣೆ ಮಾಡಲಿದೆ. 53 ಸಣ್ಣ ಉಪಗ್ರಹಗಳನ್ನು ಹೊತ್ತಿರುವ ಈ ರಾಕೆಟ್ ದೇಶದ ಮೊದಲ ಮರುಬಳಕೆಯ ಹೈಬ್ರಿಡ್ ರಾಕೆಟ್ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಗಮನಾರ್ಹ ಎಂದರೆ, ಯಶಸ್ವಿ ಚಂದ್ರಯಾನದ ಮೂಲಕ ದೇಶದ ʻಮೂನ್ಮ್ಯಾನ್ʼ ಎಂದೇ ಜನಪ್ರಿಯರಾಗಿರುವ ಇಸ್ರೋದ ಮಾಜಿ ನಿರ್ದೇಶಕ ಎಂ. ಅಣ್ಣಾದುರೈ ಅವರು ಈ ಯೋಜನೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಯೋಜನೆಗೆ ʻಮಿಷನ್ ರೂಮಿ-2024ʼ ಎಂದು ಹೆಸರಿಡಲಾಗಿದೆ.
ಶನಿವಾರ ಈಸ್ಟ್ ಕೋಸ್ಟ್ ರಸ್ತೆಯ ಟಿಟಿಡಿಸಿ ಮೈದಾನದಲ್ಲಿ ಬೆಳಗ್ಗೆ 7ಕ್ಕೆ ಈ ರಾಕೆಟ್ ಉಡಾವಣೆ ನಡೆಯಲಿದೆ. ಲಾರಿಯ ಮೇಲೆ ಹೈಡ್ರಾಲಿಕ್ ಲಾಂಚರ್ ಇಟ್ಟು ರಾಕೆಟ್ ಉಡಾವಣೆ ಮಾಡಲಾಗುತ್ತದೆ. ಈ ಸಂಬಂಧ ಸರ್ಕಾರ, ನಾಗರಿಕ ವಿಮಾನಯಾನ ನಿರ್ದೇಶನಾಲಯ, ವಾಯುಪಡೆ ಸೇರಿದಂತೆ ಇನ್ನಿತರೆ ಸಂಸ್ಥೆಗಳಿಂದ ಅನುಮತಿ ಪಡೆಯಲಾಗಿದೆ ಎಂದು ಕಂಪನಿ ತಿಳಿಸಿದೆ.