ಉಕ್ರೇನ್ ಮೇಲೆ ಸಮರಸಾರಿರುವ ರಷ್ಯಾಗೆ ಮತ್ತೊಮ್ಮೆ ಶಾಂತಿ ಮಂತ್ರದ ಬೋಧನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಬಾಂಬ್ಗಳ ಭೋರ್ಗರೆತ, ಗುಂಡು ಹಾಗೂ ಬಂದೂಕಿನ ಸದ್ದುಗಳ ಮಧ್ಯೆ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಯುದ್ಧಭೂಮಿಯಲ್ಲಿ ಯಾವುದೇ ವಿಷಯಗಳನ್ನು ಇತ್ಯರ್ಥ ಮಾಡಲು ಆಗವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಯುದ್ಧ ನಿಲ್ಲಿಸುವಂತೆ ರಷ್ಯಾಗೆ ಪರೋಕ್ಷ ಮನವಿ ಮಾಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ತಮ್ಮ ಭೇಟಿಯ 2ನೇ ಹಾಗೂ ಕೊನೆಯ ದಿನವಾದ ಮಂಗಳವಾರ ದಿಪಕ್ಷೀಯ ಮಾತುಕತೆ ನಡೆಸಿದ ಮೋದಿ ಮುಂದಿನ ಪೀಳಿಗೆಯ ಸುಭದ್ರ ಭವಿಷ್ಯಕ್ಕೆ ಶಾಂತಿ ಅತ್ಯಗತ್ಯವಾಗಿದೆ. ಹೀಗಾಗಿ ಶಾಂತಿ ಮರುಸ್ಥಾಪನೆ ಆಗಲು ಭಾರತವು ಸಾಧ್ಯವಾದ ಎಲ್ಲ ಸಹಕಾರವನ್ನು ನೀಡಲು ಸಿದ್ಧವಿದೆ ಎಂದು ಹೇಳಿದರು.