ರಷ್ಯಾ ಸೈನ್ಯಕ್ಕೆ ಸಹಾಯಕ ಸಿಬ್ಬಂದಿಯಾಗಿ ಭಾರತೀಯರ ನೇಮಕಾತಿಯನ್ನು ಕೊನೆಗೊಳಿಸುವ ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಬಿಡುಗಡೆಗೊಳಿಸುವ ಭಾರತದ ಮನವಿಗೆ ರಷ್ಯಾ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಬಗ್ಗೆ ಉನ್ನತ ಮೂಲಗಳು ತಿಳಿಸಿವೆ. ಸೋಮವಾರ ರಾತ್ರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಡೆದ ಅನೌಪಚಾರಿಕ ಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.
ರಷ್ಯಾ – ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಭಾರತೀಯರು ಮೃತಪಟ್ಟಿದ್ದರು. ಇದಾದ ಬಳಿಕ ಎಚ್ಚೆತ್ತುಕೊಂಡ ಭಾರತೀಯ ವಿದೇಶಾಂಗ ಇಲಾಖೆ, ಸೈನ್ಯಕ್ಕೆ ಭಾರತೀಯರ ನೇಮಕಾತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಹೇಳಿತ್ತು. ಅಲ್ಲದೇ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ರಷ್ಯಾಕ್ಕೆ ಒತ್ತಾಯಿಸಿತ್ತು. ಸುಮಾರು 200 ಭಾರತೀಯರು ರಷ್ಯಾ ಸೇನೆಯಲ್ಲಿ ಭದ್ರತಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ವರು ಭಾರತೀಯರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ. ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 10 ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ.