ತುಮಕೂರು: ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠಕ್ಕೆ ನಟ ಡಾಲಿ ಧನಂಜಯ್ ಭೇಟಿ ನೀಡಿದ್ದಾರೆ. ಸಿದ್ದಗಂಗಾ ಶ್ರೀಗಳಿಗೆ ಮದುವೆ ಪತ್ರಿಕೆಯನ್ನ ನೀಡಿ ಸಿದ್ದಗಂಗಾ ಶ್ರೀಗಳಿಗೆ ನಟ ಡಾಲಿ ಧನಂಜಯ್ ಆಹ್ವಾನ ನೀಡಿದ್ದಾರೆ.
ಮಠಕ್ಕೆ ಭೇಟಿ ನೀಡಿದ ನಟ ಡಾಲಿ ಧನಂಜಯ್, ಮೊದಲು ಶಿವಕುಮಾರ ಶ್ರೀಗಳ ಗದ್ದಿಗೆಗೆ ಪೂಜೆಯನ್ನ ಸಲ್ಲಿಸಿದರು. ಲಗ್ನ ಪತ್ರಿಕೆ ಪೂಜೆ ಮಾಡಿಸಿದರು. ಬಳಿಕ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮಿಗಳ ಆಶೀರ್ವಾದ ಪಡೆದರು. ಈ ವೇಳೆ ಸ್ನೇಹಿತರು ಜೊತೆಗಿದ್ದರು.
ಡಾಲಿ ಧನಂಜಯ್ ಅವರ ವಿವಾಹ ಇದೇ ಫೆಬ್ರವರಿ 16ರಂದು ಮೈಸೂರಿನಲ್ಲಿ ನಡೆಯಲಿದೆ. ಡಾಕ್ಟರ್ ಧನ್ಯತಾ ಅವರ ಕೈ ಹಿಡಿಯಲಿದ್ದಾರೆ. ಈಗಾಗಲೇ ಇಬ್ಬರು ತಮ್ಮ ಮದುವೆಯ ಆಮಂತ್ರಣ ಪತ್ರವನ್ನು ಅನೇಕ ಗಣ್ಯರಿಗೆ ನೀಡುತ್ತಿದ್ದಾರೆ.
ಮಾಜಿ ಪಿಎಂ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರಿಗೆ ನಟ ವಿವಾಹಕ್ಕೆ ಆಹ್ವಾನ ನೀಡಿದ್ದಾರೆ. ಮೈಸೂರಿನಲ್ಲಿ ಮದುವೆ ಸಮಾರಂಭ ನಡೆಯಲಿದೆ.
ಇನ್ನುಳಿದಂತೆ ಡಾಲಿ ಧನಂಜಯ್ ಮತ್ತು ಡಾ ಧನ್ಯತಾ ಅವರದ್ದು ಇಂದು ನಿನ್ನೆಯ ಸ್ನೇಹ ಅಲ್ಲ. ಇಬ್ಬರದ್ದು ಅನೇಕ ವರ್ಷಗಳ ಪರಿಚಯ. ಚಿತ್ರದುರ್ಗದ ಮೂಲದ ಧನ್ಯತಾ ಓದಿದ್ದೆಲ್ಲ ಮೈಸೂರಿನಲ್ಲಿ. ಇನ್ನೂ ಅರಸೀಕೆರೆ ಹುಡುಗ ಧನಂಜಯ್ ಕೂಡ ತಮ್ಮ ವಿದ್ಯಾಭ್ಯಾಸ ಮಾಡಿದ್ದು ಮೈಸೂರಿನಲ್ಲಿಯೇ. ಹೀಗೆ ಮೈಸೂರಿನ ಜೊತೆ ವಿಶೇಷ ನಂಟು ಹೊಂದಿರುವ ಇಬ್ಬರು ಸ್ನೇಹಿತರಾಗಿದ್ದಾರೆ. ಆ ನಂತರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈಗ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯ ಬಂಧನಕ್ಕೊಳಗಾಗಲು ಇಬ್ಬರು ಮುಂದಾಗಿದ್ದಾರೆ.ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಧನ್ಯತಾ ಅವರ ಪೋಷಕರು ಸರ್ಕಾರಿ ನೌಕರರಾಗಿದ್ದವರು. ಈಗ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.
ಇನ್ನೂ ಕಳೆದ ನವೆಂಬರ್ನಲ್ಲಿ ಸರಳವಾಗಿ ಇಬ್ಬರ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು.ಧನಂಜಯ್- ಧನ್ಯತಾ ಕುಟುಂಬ ಸದಸ್ಯರು, ಸ್ನೇಹಿತರು ಮಾತ್ರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇಬ್ಬರ ಮದುವೆ ಫೆಬ್ರವರಿ 15-16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಮದುವೆ ಹಿನ್ನೆಲೆ ಸ್ನೇಹಿತರು, ಚಿತ್ರರಂಗದ ಆಪ್ತರು ಮತ್ತು ರಾಜಕಾರಣಿಗಳಿಗೆ ಡಾಲಿ ಧನಂಜಯ್ ಮತ್ತು ಡಾ.ಧನ್ಯತಾ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ.