ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಯುಐ’ ಇಂದು (ಡಿಸೆಂಬರ್ 20) ರಿಲೀಸ್ ಆಗಿದೆ. ಉಪೇಂದ್ರ ಅವರ ನಿರ್ದೇಶನ ಎಂಬ ಒಂದೇ ಕಾರಣದಿಂದ ಚಿತ್ರಕ್ಕೆ ಹೆಚ್ಚು ಹೈಪ್ ಸಿಕ್ಕಿದೆ. ಮುಂಜಾನೆಯೇ ಅನೇಕ ಶೋಗಳು ಹೌಸ್ಫುಲ್ ಆಗಿವೆ. ಆ ಮೂಲಕ ‘ಯುಐ’ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಎಂದಿನಂತೆ ತಮ್ಮ ಬುದ್ಧಿವಂತಿಕೆ ಮೂಲಕ ಉಪೇಂದ್ರ ಅವರು ಪ್ರೇಕ್ಷಕರ ಮೆದುಳಿಗೆ ಕೈ ಹಾಕಿದ್ದಾರೆ. ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಗೆ ಬಂದಿರುವ ಪ್ರೇಕ್ಷಕರು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ಕೆಲವರಿಗೆ ಸಿನಿಮಾ ಇಷ್ಟ ಆಗಿದೆ. ಇನ್ನೂ ಕೆಲವರಿಗೆ ಪೂರ್ತಿಯಾಗಿ ಅರ್ಥ ಆಗಿಲ್ಲ. ಇನ್ನೊಮ್ಮೆ ನೋಡಬೇಕು ಎನ್ನುವ ಪ್ರೇಕ್ಷಕರು ಕೂಡ ಇದ್ದಾರೆ.
ಉಪೇಂದ್ರ ಅಂದ್ರೆ ಹೀಗೇ ಅಲ್ವೇ? ಉಪ್ಪಿ ಸಿನಿಮಾಗಳು ಒಂದು ಸಲ ನೋಡಿದ್ರೆ ಅರ್ಥವೇ ಆಗೋದಿಲ್ಲ. ಆ ಒಂದು ಸತ್ಯ ಇದೀಗ ಯುಐ ಸಿನಿಮಾದ ವಿಷಯದಲ್ಲೂ ಮುಂದುವರೆದಿದೆ.ಯುಐ ಚಿತ್ರ ನೋಡಿದವ್ರ ಮೊಗದಲ್ಲಿ ಒಂದು ನಗು ಇದೆ. ದಡ್ಡತನದ ನಗುವೋ..? ಇಲ್ಲ ಅರ್ಥ ಆಗ್ತಿಲ್ಲ ಅಂತ ಬರ್ತಿರೋ ನಗುವೋ..? ಹೇಳೋದು ಕಷ್ಟವೇ ಆಗುತ್ತದೆ. ಆದರೆ, ಅರ್ಧಂಬರ್ಧ ತಿಳಿದುಕೊಂಡವ್ರು ಯೋಚನೆ ಮಾಡ್ತಾನೇ ಹೊರಗೆ ಬರ್ತಿದ್ದಾರೆ. ರಿಯಾಕ್ಷನ್ ಕೊಡೊಕೋ ಹೋಗ್ತಾನೂ ಇಲ್ಲ ನೋಡಿ.
ಆರಂಭದಲ್ಲೇ ಉಪೇಂದ್ರ ಶಾಕ್ ನೀಡಿದ್ದಾರೆ. ‘ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ’ ಎಂದು ಹೇಳುವ ಮೂಲಕ ಜನರನ್ನು ಕನ್ಫ್ಯೂಸ್ ಮಾಡಿಸುತ್ತಾರೆ. ಟಿಕೆಟ್ಗೆ ದುಡ್ಡು ಕೊಟ್ಟು ಬಂದ ಪ್ರೇಕ್ಷಕರನ್ನು ಎದ್ದು ಹೋಗಿ ಅಂತ ಹೇಳಿದ್ದಕ್ಕೆ ಪ್ರೇಕ್ಷಕರಿಗೆ ಶಾಕ್ ಆಗಿದೆ. ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಉಪೇಂದ್ರ ಅವರ ಅಪ್ಪಟ ಅಭಿಮಾನಿಗಳು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ಬಾರಿಗೆ ಅರ್ಥ ಆಗದೇ ಇದ್ದರೂ ಪರವಾಗಿಲ್ಲ. ಎರಡನೇ ಸಲ ಸಿನಿಮಾ ನೋಡುವುದಾಗಿ ಅನೇಕರು ಹೇಳಿದ್ದಾರೆ.ಸಿನಿಮಾ ನೋಡಿ ಬಂದ ಅದ್ಯಾರೋ ಅಭಿಮಾನಿ ಹೇಳುವ ಮಾತು ಚೆನ್ನಾಗಿದೆ. ನಾನು ಎಲ್ಲಿದ್ದೇನೆ ಅಂತ ತಿಳಿತಾನೇ ಇಲ್ಲ. ಅಷ್ಟು ವಿಷಯ ಚಿತ್ರದಲ್ಲಿದೆ. ಇದನ್ನ ಡಿಕೋಡ್ ಮಾಡಿಕೊಂಡು ನೋಡ್ಬೇಕು. ಆಗಲೇ ನಮಗೆ ಅರ್ಥ ಆಗುತ್ತದೆ. ಇಡೀ ಸಿನಿಮಾವನ್ನ ಅರ್ಥ ಮಾಡಿಕೊಂಡ್ರೇನೆ ಚೆನ್ನಾಗಿರುತ್ತದೆ. ಆಗಲೇ ಅರ್ಥ ಆಗುತ್ತದೆ ಅಂತಲೇ ಹೇಳಿಕೊಂಡಿದ್ದಾರೆ.
ಯುಐ ಸಿನಿಮಾ ಪೂರ್ತಿಯಾಗಿ ಅರ್ಥ ಆಗದೇ ಇದ್ದರೂ ಪರವಾಗಿಲ್ಲ, ಕೊನೇ ಪಕ್ಷ ಡಿಫರೆಂಟ್ ಆಗಿದೆ ಎಂದು ಕೂಡ ಕೆಲವು ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಇಡೀ ಸಿನಿಮಾ ಉಪೇಂದ್ರ ಅವರ ಒನ್ ಮ್ಯಾನ್ ಶೋ ರೀತಿ ಇದೆ. ದ್ವಿಪಾತ್ರದಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತೋರಿಸಿರುವ ಎಷ್ಟೋ ವಿಚಾರಗಳು ಜನರಿಗೆ ಅನೇಕ ವರ್ಷಗಳ ಬಳಿಕ ಅರ್ಥ ಆಗಬಹುದು ಎಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ, ಯುಐ ಚಿತ್ರ ಆಯಾ ಪ್ರೇಕ್ಷಕರ ಆಸಕ್ತಿ ಮತ್ತು ಬುದ್ಧಿಮಟ್ಟಕ್ಕೆ ತಕ್ಕನಾಗಿಯೇ ಅರ್ಥ ಆಗಿದೆ. ಸ್ವಲ್ಪ ಅರ್ಥ ಆದವ್ರು ಯೋಚನೆ ಮಾಡ್ತಾನೇ ಹೋಗಿದ್ದಾರೆ. ಏನೂ ಅರ್ಥ ಆಗದೇ ಇರೋರು, ಇನ್ನೂ ಒಂದು ಸಲ ನೋಡ್ಬೇಕು ಅಂತಲೇ ಹೊರಗೆ ಹೋಗಿದ್ದಾರೆ ಅಂತಲೂ ಹೇಳಬಹುದು.