ಕನ್ನಡ ಚಿತ್ರರಂಗದ ಖ್ಯಾತ ಚಿತ್ರನಟಿಯಾಗಿ, ರಾಜಕಾರಣಿಯಾಗಿ ಜನಪ್ರೀಯರಾಗಿರುವ ಉಮಾಶ್ರೀ ಶುಕ್ರವಾರ ಯಕ್ಷಗಾನ ಕಲಾವಿದೆಯಾಗಿ ರಂಗಸಜ್ಜಿಕೆ ಏರಲಿದ್ದಾರೆ. ಯಕ್ಷಗಾನದ ಅತ್ಯಂತ ಸವಾಲಿನ ಪಾತ್ರ ಎಂದೇ ಪರಿಗಣಿಸಲ್ಪಟ್ಟ ಮಂಥರೆಯ ವೇಷದೊಂದಿಗೆ ಮೊದಲ ಬಾರಿಗೆ ಯಕ್ಷರಂಗಭೂಮಿಗೆ ಉಮಾಶ್ರೀ ಅಡಿ ಇಡುತ್ತಿದ್ದಾರೆ.
ಉಮಾಶ್ರೀ ಅವರು ಮೇ 10 , 1957 ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. ಅವರ ಕುಟುಂಬ ಬಹಳ ಬಡತನದಿಂದ ಕೂಡಿತ್ತು. ಚಿತ್ರನ್ನ ಸಿಗುತ್ತದೆ ಎಂದು ಉಮಾಶ್ರೀ ಅವರು ರಂಗಭೂಮಿಗೆ ಸೇರಿಕೊಂಡೆ ಎಂದು ಹೇಳಿಕೊಂಡಿದ್ದಾರೆ. ಉಮಾಶ್ರೀ ಅವರು ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ನಟಿ. ವೃತ್ತಿ ರಂಗಭೂಮಿಯಲ್ಲಿ ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರುಗಳ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು ಉಮಾಶ್ರೀ. ಉಮಾಶ್ರೀ ಅವರು 1984 ರಲ್ಲಿ ಕಾಶಿನಾಥ್ ಅವರೊಂದಿಗೆ ಅನುಭವ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭ ಮಾಡಿದರು. ಆದರೆ ಅದಕ್ಕೂ ಮೊದಲು ಅವರು 1980 ರ ಕನ್ನಡ ಚಲನಚಿತ್ರ ಟಿಎಸ್ ನಾಗಾಭರಣ ನಿರ್ದೇಶನದ ಬಂಗಾರದ ಜಿಂಕೆಯಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ ರಂಗದಲ್ಲಿ 125 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಲ್ಲದೇ ನಾಟಕ ರಂಗದಲ್ಲಿ ನಟಿಸಿ ಹೆಸರುಗಳಿಸಿರುವ ಉಮಾಶ್ರೀ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಚೆಂಡೆಯ ಪೆಟ್ಟಿಗೆ ಹೆಜ್ಜೆ ಹಾಕಲಿದ್ದಾರೆ. ಜನವರಿ 17ರಂದು ಹೊನ್ನಾವರದ ಸೇಂಟ್ ಅಂಥೋನಿ ಮೈದಾನದಲ್ಲಿ ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಆಯೋಜಿಸಿರುವ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಉಮಾಶ್ರೀ ಮಂಥರೆ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಪ್ಪಿ ಹೆಗಡೆ ಸಾಣ್ಮನೆ ಈ ಕಾರ್ಯಕ್ರಮ ಆಯೋಜಿಸಿದ್ದು, ಕಳೆದೊಂದು ತಿಂಗಳ ಹಿಂದೆ ಉಮಾಶ್ರೀಯವರನ್ನು ಸಂಪರ್ಕಿಸಲಾಗಿತ್ತು.
ತಾವು ಯಕ್ಷಗಾನದಲ್ಲಿ ಪಾತ್ರ ಮಾಡುತ್ತಿರುವುದನ್ನು ಉಮಾಶ್ರೀ ದೃಢಪಡಿಸಿದ್ದು, ಜ. 12, 13ರಿಂದ ಯಕ್ಷಗಾನೀಯ ವೇಷಭೂಷಣದಲ್ಲೇ ತಾಲೀಮು ಕೂಡ ನಡೆಸಿದ್ದಾರೆ. ಪ್ರದರ್ಶನ ಹಿನ್ನೆಲೆಯಲ್ಲಿ ಉಮಾಶ್ರೀ ಗುರುವಾರ ರಾತ್ರಿಯೇ ಬೆಂಗಳೂರಿನಿಂದ ಹೊನ್ನಾವರಕ್ಕೆ ಪ್ರಯಾಣಿಸಿದ್ದಾರೆ.