ತೆಲುಗು ನಿರ್ಮಾಪಕ ಟಿಜಿ ವಿಶ್ವ ಪ್ರಸಾದ್ ನೇತೃತ್ವದ ಪೀಪಲ್ ಮೀಡಿಯಾ ಫ್ಯಾಕ್ಟರಿ ಇದೀಗ ಸ್ಯಾಂಡಲ್ವುಡ್ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ನಿರ್ಮಾಣ ಮಾಡುತ್ತಿದೆ. ಇದೀಗ ಈ #PMF49ನೇ ಪ್ರಾಜೆಕ್ಟ್ನ “ರೇಜ್ ಆಫ್ ರುದ್ರ” ಪೋಸ್ಟರ್ ಅನಾವರಣಗೊಂಡಿದೆ. ತೆಲುಗಿನಲ್ಲಿ ಈಗಾಗಲೇ ಬ್ಲಾಕ್ಬಸ್ಟರ್ ಹಿಟ್ಗಳನ್ನು ನೀಡಿರುವ ಈ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ, ಈಗ ಈ ಬಹು ನಿರೀಕ್ಷಿತ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲು ಸಜ್ಜಾಗಿದೆ.
ಕೃಷ್ಣಂ ಪ್ರಣಯ ಸಖಿಯ ಯಶಸ್ಸಿನ ನಂತರ, ಗೋಲ್ಡನ್ ಸ್ಟಾರ್ ಗಣೇಶ್ ಜತೆಗೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಕೈ ಜೋಡಿಸಿದ್ದು, ನಿರೀಕ್ಷೆ ಜತೆಗೆ ಉತ್ಸಾಹವೂ ದುಪ್ಪಟ್ಟಾಗಿದೆ. ಅದರಂತೆ “ರೇಜ್ ಆಫ್ ರುದ್ರ” ಟೈಟಲ್ ಟೀಸರ್ಗೂ ಕ್ಷಣಗಣನೆ ಆರಂಭವಾಗಿದ್ದು, ಕುತೂಹಲಗಳ ಗುಚ್ಛವನ್ನೇ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
2025ರ ಜನವರಿ 2 ರಂದು ಈ ಚಿತ್ರದ ಶೀರ್ಷಿಕೆ ಟೀಸರ್ ಅನಾವರಣದೊಂದಿಗೆ ಹೊಸ ಜಗತ್ತನ್ನು ಪರಿಚಯಿಸಲು ಪೀಪಲ್ ಮೀಡಿಯಾ ಫ್ಯಾಕ್ಟರಿ ಸಿದ್ಧವಾಗಿದೆ. ಈಗಾಗಲೇ ರಾಂಪೇಜ್ ಆಫ್ ಕ್ಷುದ್ರ ಪೋಸ್ಟರ್ನಿಂದಲೇ ಕುತೂಹಲ ಮೂಡಿಸಿದ್ದ ಈ ಸಿನಿಮಾ, ಟೈಟಲ್ ಟೀಸರ್ನಲ್ಲಿ ರುದ್ರ ಮತ್ತು ಕ್ಷುದ್ರನ ಪರಿಚಯವಾಗಲಿದೆ. ಈ ಸಿನಿಮಾ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಅವರು ಹಿಂದೆಂದೂ ಕಾಣಿಸದ ಅತ್ಯದ್ಭುತವಾದ ಹೊಸ ಅವತಾರದೊಂದಿಗೆ ಆಗಮಿಸಲಿದ್ದಾರೆ.
ಧನಂಜಯ್ ನಿರ್ದೇಶನ
ಬಿ. ಧನಂಜಯ ಈಗಾಗಲೇ ನೃತ್ಯ ನಿರ್ದೇಶನದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ತಮ್ಮ ಚೊಚ್ಚಲ ನಿರ್ದೇಶನದೊಂದಿಗೆ ಮೂಡಿ ಮಾಡಲಿದ್ದಾರೆ. ಕಥಾಹಂದರ, ಸಿನಿಮಾದ ಗಟ್ಟಿ ಕಂಟೆಂಟ್ ಮತ್ತು ಮೇಕಿಂಗ್ನಿಂದಲೇ ರೇಜ್ ಆಫ್ ರುದ್ರ ಪ್ರೇಕ್ಷಕನಿಗೆ ದೊಡ್ಡ ಸಿನಿಮೀಯ ಅನುಭವ ನೀಡಲಿದೆ. ಟಿಜಿ ವಿಶ್ವ ಪ್ರಸಾದ್ ನಿರ್ಮಾಣದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲಾಗಿ ನಿಲ್ಲಲಿದೆ ಎಂಬ ಭರವಸೆ ಚಿತ್ರತಂಡದ್ದು.
ಕನ್ನಡ ಚಿತ್ರೋದ್ಯಮದ ಸಂಭ್ರಮವಾಗಲಿದೆ..
ಅಭಿಮಾನಿಗಳಿಗೆ, ಇದು ಕೇವಲ ಸಿನಿಮಾ ಆಗಿರಬಹುದು. ಅದಕ್ಕೂ ಹೆಚ್ಚಿನದಾಗಿ, ಕನ್ನಡ ಚಿತ್ರರಂಗದ ಬೆಳವಣಿಗೆ ಮತ್ತು ಸಾಮರ್ಥ್ಯದ ದೊಡ್ಡ ಸಂಭ್ರಮಾಚರಣೆಯಾಗಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ಜತೆಯಾಗಿ ಅದನ್ನು ಇನ್ನಷ್ಟು ಮೇಲಕ್ಕೆ ಎತ್ತರಿಸಲಿವೆ.