ಸ್ಯಾಂಡಲ್ವುಡ್ನ ಹಿರಿಯ ನಟ ಸರಿಗಮ ವಿಜಯ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿತ್ತು. ಕಳೆದ ಕೆಲ ದಿನಗಳಿಂದ ಸರಿಗಮ ವಿಜಿ ಅವರು ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರಿಗಮ ವಿಜಿ ಅವರು ಇಂದು ನಿಧನರಾಗಿದ್ದಾರೆ.
ಸತತ 60 ವರ್ಷಗಳಿಂದ ಕಲಾ ಸೇವೆ ಮಾಡಿರೋ ಹಿರಿಜೀವ ಸರಿಗಮ ವಿಜಿ ಅವರು ಇಂದು ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ. 1965 ರಿಂದ 2024ರ ವರೆಗೆ ಆ್ಯಕ್ಟೀವ್ ಆಗಿದ್ದ ಸರಿಗಮ ವಿಜಿ ಅವರು ಇಂದು ನಿಧನ ಹೊಂದಿದ್ದಾರೆ. ಇವರು 1975ರ ಬೆಳುವಲದ ಮಡಿಲಲ್ಲಿ ಚಿತ್ರದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 2018ರ ವೇಳೆಗೆ 269 ಚಿತ್ರಗಳಲ್ಲಿ ಹಿರಿಯ ಕಲಾವಿದ ಸರಿಗಮ ವಿಜಿ ಅವರು ನಟಿಸಿದ್ದರು.
ಸರಿಗಮ ವಿಜಿ ಅವರು 80ಕ್ಕೂ ಅಧಿಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಚಿತ್ರರಂಗದ ಜೊತೆ ರಂಗಭೂಮಿ, ಕಿರುತೆರೆಯಲ್ಲೂ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದಾರೆ. 1390ಕ್ಕೂ ಅಧಿಕ ಬಾರಿ ಸಂಸಾರದಲ್ಲಿ ಸರಿಗಮ ನಾಟಕಕ್ಕಾಗಿ ಬಣ್ಣ ಹಚ್ಚಿದ್ದಾರೆ. ವಿಜಯ್ ಕುಮಾರ್ ಅವರೇ ನಟಿಸಿ, ನಿರ್ದೇಶಿಸಿದ ನಾಟಕವಿದು. ಸಂಸಾರದಲ್ಲಿ ಸರಿಗಮ ನಾಟಕದಿಂದಲೇ ಸರಿಗಮ ವಿಜಿ ಅನ್ನೋ ಹೆಸರು ಬಂದಿತ್ತು.
ಸುಮಾರು 2400ಕ್ಕೂ ಅಧಿಕ ಸೀರಿಯಲ್ ಎಪಿಸೋಡ್ ಗಳನ್ನ ನಿರ್ದೇಶನ ಕೂಡ ಮಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಗೆ ಜ್ಯೂರಿಯಾಗಿದ್ದರು. ಇವರ 38 ವರ್ಷದ ಕಲಾ ಸೇವೆಯನ್ನ ಗುರುತಿಸಿ 2018ರಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ದರು ಸರಿಗಮ ವಿಜಿ. ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ & ಎಜ್ಯುಕೇಶನ್ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ನಿಡಲಾಗಿತ್ತು.
ಮದುವೆ ಮಾಡಿ ನೋಡು, ಬೆಳುವಲದ ಮಡಿಲಲ್ಲಿ, ಕಪ್ಪು ಕೋಲ, ಪ್ರತಾಪ್, ಮನಮೆಚ್ಚಿದ ಸೊಸೆ, ಕೆಂಪಯ್ಯ IPS, ಗೋಲ್ಡ್ ಮೆಡಲ್, ಜಗತ್ ಕಿಲಾಡಿ, ಯಮಲೋಕದಲ್ಲಿ ವೀರಪ್ಪನ್, ದುರ್ಗಿ, ಸ್ವಾರ್ಥರತ್ನ ಚಿತ್ರಗಳು ಸರಿಗಮ ವಿಜಿ ಅವರ ಒಂದಷ್ಟು ಆಲ್ ಟೈಂ ಹಿಟ್ ಸಿನಿಮಾಗಳಾಗಿವೆ.