ಮುಡಾ ಹಗರಣ ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಹೊತ್ತಿನಲ್ಲೇ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿಯಲ್ಲಿ ಖರ್ಗೆಯನ್ನು ಭೇಟಿಯಾದ ಸತೀಶ್ ಜಾರಕಿಹೊಳಿ ಸುಮಾರು ಒಂದು ತಾಸು ಸಮಾಲೋಚನೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆಯ ಚರ್ಚೆಗಳು ಹಾಗೂ ಇತರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಖರ್ಗೆ ಮಾತ್ರವಲ್ಲದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನೂ ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ಗುರುವಾರ ರಾತ್ರಿ 9ಗಂಟೆ ಸುಮಾರಿಗೆ ವೇಣುಗೋಪಾಲ್ ಭೇಟಿಯಾಗಿರುವ ಸತೀಶ್ ಜಾರಕಿಹೊಳಿ ಸುಮಾರು ಅರ್ಧಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಮುಡಾ ಪ್ರಕರಣದ ಬೆಳವಣಿಗೆಗಳ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಸಿಎಂ ವಿರುದ್ಧ ಇಡಿ ತನಿಖೆಯ ಪರಿಣಾಮಗಳ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಕರ್ನಾಟಕಕ್ಕೆ ಬರುವುದಾಗಿ ವೇಣುಗೋಪಾಲ್ ಹೇಳಿದ್ದಾರೆ.