ಶಕ್ತಿ ಯೋಜನೆಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ಕುಸಿಯುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಆಘಾತ ತಂದಿದೆ. ಮಾಹಿತಿ ಕೊರತೆಯಿಂದ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಎಂದು ಹೇಳಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದರಿಂದ ಮೆಟ್ರೋ ಆದಾಯ ಕುಸಿದಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, “ಮೆಟ್ರೋ ಆದಾಯ ಹಾಗೂ ಶಕ್ತಿ ಯೋಜನೆ ಬಗ್ಗೆ ಪ್ರಧಾನಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮೆಟ್ರೋ 130 ಕೋಟಿ ರೂ. ಆದಾಯ ಗಳಿಸಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಶೇ. 30 ರಷ್ಟು ಏರಿಕೆ ಕಂಡಿದೆ. ನಮ್ಮ ರಾಜ್ಯದ ಪೈಕಿ ಬೆಂಗಳೂರಿನಲ್ಲಿ ಮಾತ್ರ ಮೆಟ್ರೋ ಇದೆ. ಶಕ್ತಿ ಯೋಜನೆ ಕರ್ನಾಟಕದಾದ್ಯಂತ ಜಾರಿ ಮಾಡಲಾಗಿದೆ. ನಾವು ಬಡವರ ಬಗ್ಗೆ ಆಲೋಚಿಸಿ ಈ ಯೋಜನೆ ಜಾರಿ ಮಾಡಿದ್ದೇವೆ ಎಂದರು.
ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದರೂ ಕೆಎಸ್ಆರ್ ಟಿಸಿ ಹಾಗೂ ಮೆಟ್ರೋ ಸಂಸ್ಥೆಗಳನ್ನು ಸಮರ್ಥವಾಗಿ ನಡೆಸುತ್ತಿದ್ದೇವೆ. ಪ್ರಧಾನಮಂತ್ರಿಗಳಿಗೆ ಮಾಧ್ಯಮಗಳ ಮೂಲಕ ಈ ಮಾಹಿತಿ ನೀಡಲು ಬಯಸುತ್ತೇನೆ. ನಮ್ಮ ಶಕ್ತಿ ಯೋಜನೆ ಬಗ್ಗೆ ಬೇರೆ ರಾಜ್ಯದವರು ಬಂದು ಮಾಹಿತಿ ಪಡೆಯುತ್ತಿದ್ದಾರೆ. ಈ ಯೋಜನೆ ಜನರಿಗೆ ಅನುಕೂಲ ತಂದಿದೆ, ಹಾಗೆಯೇ ವಿಶ್ವಾಸ ಗಳಿಸಿದೆ. ದಿನನಿತ್ಯ ರಾಜ್ಯದಲ್ಲಿ ಮಹಿಳೆಯರು 60 ಲಕ್ಷ ಟ್ರಿಪ್ ನಷ್ಟು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರು ಈ ಯೋಜನೆಯಿಂದ ತೃಪ್ತರಾಗಿ ಸಂತೋಷದಿಂದ ಪ್ರಯಾಣ ಮಾಡುತ್ತಿದ್ದಾರೆ” ಎಂದು ತಿಳಿಸಿದರು.