ಆಧಾರ್ ಕಾರ್ಡ್ನಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಬಿಟ್ಟು ಬೇರೆ ಭಾಷೆ ಪ್ರಿಂಟ್ ಆಗಿದ್ದರೆ, ಅಂತಹ ಆಧಾರ್ ಮಹಿಳೆಯರಿಗೆ ಬಸ್ನಲ್ಲಿ ಕಂಡಕ್ಟರ್ಗಳು ಶಕ್ತಿ ಯೋಜನೆಯ ಟಿಕೆಟ್ ನೀಡುತ್ತಿರಲಿಲ್ಲ. ಇದರಿಂದ ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವೆ ಸಾಕಷ್ಟು ಜಗಳಗಳಾಗುತ್ತಿದ್ದವು. ಇದನ್ನು ತಪ್ಪಿಸಲು ಬಿಎಂಟಿಸಿ ಮುಂದಾಗಿದ್ದು, ಇನ್ಮುಂದೆ ಆಧಾರ್ ಕಾರ್ಡ್ನಲ್ಲಿ ಕರ್ನಾಟಕದ ವಿಳಾಸ ಇದ್ದರೆ ಸಾಕು, ಶಕ್ತಿ ಯೋಜನೆ ಟಿಕೆಟ್ ನೀಡಬಹುದು ಸೂಚನೆ ನೀಡಿದೆ. ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದವರು, ಬಿಎಂಟಿಸಿ ಬಸ್ನಲ್ಲಿ ಉಚಿತವಾಗಿ ಸಂಚಾರ ಮಾಡಬಹುದು. ಆಧಾರ್ ಕಾರ್ಡ್ ಕನ್ನಡದಲ್ಲಿ ವಿಳಾಸ ಇಲ್ಲಾಂದರೂ ಪರವಾಗಿಲ್ಲ, ಕರ್ನಾಟಕದ ವಿಳಾಸವಿದ್ದರೆ ಸಾಕು ಎಂದು ಬಿಎಂಟಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ಆಧಾರ್ ಕಾರ್ಡ್ನಲ್ಲಿ ಕನ್ನಡದಲ್ಲಿ ವಿಳಾಸವಿರಬೇಕೆಂದು ಬಿಎಂಟಿಸಿಯ ಕಂಡಕ್ಟರ್ಗಳು ಕಿರಿಕ್ ಮಾಡುತ್ತಿದ್ದರು. ದೇಶದ ನಾಗರೀಕರು ಆಧಾರ್ ಕಾರ್ಡನ್ನು ದೇಶದಾದ್ಯಂತ ಯಾವುದೇ ರಾಜ್ಯದಲ್ಲಿ ಪಡೆಯಲು ಅವಕಾಶವಿದ್ದು, ಯಾವ ರಾಜ್ಯದಲ್ಲಿ ಆಧಾರ್ ಕಾರ್ಡ್ ಅನ್ನು ಪಡೆಯುತ್ತಾರೋ ಆ ರಾಜ್ಯದ ಅಧಿಕೃತ ಭಾಷೆ ಮತ್ತು ಅಂಗ್ಲ ಭಾಷೆಯಲ್ಲಿ ಆಧಾರ್ ಕಾರ್ಡ್ ಮುದ್ರಣವಾಗುತ್ತದೆ. ಆದ್ದರಿಂದ ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಮುದ್ರಿತ ಆಧಾರ್ ಕಾರ್ಡ್ ಗಳಲ್ಲಿನ ಆಂಗ್ಲ ಭಾಷೆಯಲ್ಲಿರುವ ವಿಳಾಸವನ್ನು ಪರಿಶೀಲಿಸಿ ವಿಳಾಸವು ಕರ್ನಾಟಕ ರಾಜ್ಯದಾಗಿದ್ದಲ್ಲಿ, ಆ ಆಧಾರ್ ಕಾರ್ಡ್ ಅನ್ನು ಮಾನ್ಯ ಮಾಡಿ ಶಕ್ತಿಯೋಜನೆ ಅಡಿಯಲ್ಲಿ ಉಚಿತ ಟಿಕೆಟ್ ನೀಡಲು ಸೂಚನೆ ನೀಡಲಾಗಿದೆ.
ಒಟ್ಟಿನಲ್ಲಿ ಬಿಎಂಟಿಸಿ ಬಸ್ನಲ್ಲಿ ಉಚಿತವಾಗಿ ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡಬೇಕೆಂದರೆ, ಆಧಾರ್ ಕಾರ್ಡ್ ಕನ್ನಡದಲ್ಲೇ ಇರಬೇಕೆಂದು ಕಿರಿಕ್ ಮಾಡುತ್ತಿದ್ದ ಕಂಡಕ್ಟರ್ಗಳಿಗೆ ಬಿಎಂಟಿಸಿಯ ಹೊಸ ಆದೇಶ ಬ್ರೇಕ್ ಹಾಕಿರುವುದಂತೂ ನಿಜ. ಬಿಎಂಟಿಸಿ ಆದೇಶದಿಂದ ಮಹಿಳಾ ಪ್ರಯಾಣಿಕರು ಸಂತಸಗೊಂಡಿದ್ದಾರೆ.