ಶಿಗ್ಗಾಂವಿ ಉಪಚುನಾವಣೆ ಕಣದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಡುವೆ ಮನೆ ಫೈಟ್ ಜೋರಾಗಿದೆ. ಶಿಗ್ಗಾಂವಿಯಲ್ಲಿ ಕೈ ಅಭ್ಯರ್ಥಿ ಪರ ಪ್ರಚಾರದ ನಡೆಸಿದ ಸಿಎಂ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಪ್ರವಾಹ ಸಂತ್ರಸ್ತರಿಗೆ ಒಂದು ಮನೆಯನ್ನು ನಿರ್ಮಾಣ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ನಿರ್ಮಾಣ ಮಾಡಲಾಗಿದ್ದ ಮನೆಗಳ ಮುಂದೆ ಪ್ರಚಾರ ಮಾಡಿ ಸಿಎಂ ಸಿದ್ದರಾಮನಯ್ಯನವರಿಗೆ ತಿರುಗೇಟು ನೀಡಿದ್ದರು. ಶಿಗ್ಗಾಂವಿ ಚುನಾವಣಾ ಕಣದಲ್ಲಿ ಆರೋಪ ಪ್ರತ್ಯಾರೋಪದ ವಾಗ್ದಾಳಿ ಮುಂದುವರೆದಿದೆ. ಶಿಗ್ಗಾಂವಿ ತಾಲೂಕಿನ ಬಿಶೆಟ್ಟಿಕೊಪ್ಪದಲ್ಲಿ ಪ್ರವಾಹಕ್ಕೆ ಸಿಲುಕಿ ಅಶ್ವಿನಿ ರಮೇಶ್ ವಾಲಿಕಾರ ಅವರು ಮನೆ ಕಳೆದುಕೊಂಡಿದ್ದರು. ಅವರಿಗೆ ಸಂಸದ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಮನೆ ಕಟ್ಟಿಕೊಳ್ಳಲು ಐದು ಲಕ್ಷ ಮಂಜೂರು ಮಾಡಿದ್ದರು. ಇಂದು ಚುನಾವಣಾ ಪ್ರಚಾರಕ್ಕೆ ಬಿಶೆಟ್ಟಿಕೊಪ್ಪಕ್ಕೆ ತೆರಳಿದಾಗ ತಮ್ಮ ಮನೆಗೆ ಆಹ್ವಾನಿಸಿ ಸಂಸದ ಬಸವರಾಜ ಬೊಮ್ಮಾಯಿಯವರಿಗೆ ಸನ್ಮಾನ ಮಾಡಿದರು.