ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮೂರು ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಸಂಬಂಧ ತಂತ್ರಗಾರಿಕೆ ರೂಪಿಸುತ್ತಿವೆ. ಈ ನಡುವೆ ಬಿಜೆಪಿ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಹಾಗೂ ಕೈಗಾರಿಕೋದ್ಯಮಿ ಭರತ್ ಬೊಮ್ಮಾಯಿ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರದ ಸಮೀಕ್ಷೆಗಳ ಆಧಾರದ ಮೇಲೆ ಪಕ್ಷದ ನಾಯಕರು ಭರತ್ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತಿದ್ದು, ಅವರಿಗೆ ಟಿಕೆಟ್ ನೀಡುವ ಬಗ್ಗೆ ವರಿಷ್ಠರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಬೊಮ್ಮಾಯಿ ಶಿಗ್ಗಾಂವಿ ಶಾಸಕರಾಗಿ ಆಯ್ಕೆಯಾಗಿದ್ದರು. ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಸಂಸದರಾದ ನಂತರ ರಾಜೀನಾಮೆ ನೀಡಿದ್ದರು. ಶಿಗ್ಗಾಂವಿಯಲ್ಲಿ ನಮಗೆ ಬೇರೆ ಅಭ್ಯರ್ಥಿಗಳಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.
ಏತನ್ಮಧ್ಯೆ, ಬೊಮ್ಮಾಯಿ ಅವರು ಕಳೆದ ಕೆಲವು ವಾರಗಳಿಂದ ಶಿಗ್ಗಾಂವಿಯಲ್ಲಿ ವಿವಿಧ ವರ್ಗದ ಜನರನ್ನು ಭೇಟಿಯಾಗುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಭರತ್ ಕೂಡ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಭರತ್ ಅವರಿಗೆ ಟಿಕೆಟ್ ಸಿಕ್ಕರೆ ಬೊಮ್ಮಾಯಿ ಕುಟುಂಬದಿಂದ ಮೂರನೇ ತಲೆಮಾರಿನವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಬಸವರಾಜ್ ತಂದೆ ಎಸ್ ಆರ್ ಬೊಮ್ಮಾಯಿ ಸಿಎಂ ಆಗಿದ್ದರು.