ಶಿವಮೊಗ್ಗ : ನಿಗಮಕ್ಕೂ ನಾನು ಮೋಸ, ವಂಚನೆ ಮಾಡಿಲ್ಲ, ಈ ಹಗರಣಕ್ಕೂ ಕಾರಣನಲ್ಲ, ನಾನು ಹೇಡಿಯಲ್ಲ. ಆದರೆ ಅವಮಾನವನ್ನು ಸಹಿಸಲಾರೆ, ನನಗೆ ಬೇರೆ ದಾರಿ ತೋಚುತ್ತಿಲ್ಲ. ಎಲ್ಲರೂ ನನ್ನನ್ನು ಕ್ಷಮಿಸಿ.. ಇದು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರು ವಸಂತನಗರ ಖಾದಿ ಭವನದಲ್ಲಿರುವ ಕರ್ನಾಟಕ ಮಹತ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ. ಚಂದ್ರಶೇಖರನ್ ಮರಣ ಪತ್ರದಲ್ಲಿ ಈ ರೀತಿ ದಾಖಲಿಸಿದ್ದಾರೆ.
ಶಾಲೆ ನೋಟ್ಬುಕ್ನಲ್ಲಿ ಆರು ಪುಟಗಳ ಮರಣಪತ್ರವನ್ನು ಬರೆದಿರುವ ಅವರು ಪ್ರತಿ ಪುಟದ ಮೇಲೆ ಮತ್ತು ಕೆಳಗೆ ಕಿರು ಸಹಿ ಹಾಕಿದ್ದಾರೆ. ತಮ್ಮ ಸಾವಿಗೆ ಕಾರಣರು ಯಾರು ಎಂಬುದನ್ನು ಪತ್ರದ ಆರಂಭ ಮತ್ತು ಕಡೆಯಲ್ಲಿ ಎರಡು ಬಾರಿ ಸ್ಪಷ್ಟವಾಗಿ ನಮೂದಿಸಿದ್ದಾರೆ. ನಿಗಮದ ಹೆಸರಲ್ಲಿನ ಬ್ಯಾಂಕ್ ಖಾತೆಯಲ್ಲಿ ಮೇಲಾಧಿಕಾರಿಗಳು 80 ರಿಂದ 85 ಕೋಟಿ ರೂ.ಗಳನ್ನು ಲೂಟಿ ಹೊಡೆದಿರುವ ಬಗ್ಗೆ ಅವರು ದಿನಾಂಕ ಮತ್ತು ಸಮಯ ಸಹಿತ ಪ್ರತಿಯೊಂದು ವಿವರವನ್ನು ನೀಡಿದ್ದಾರೆ.
ಆರು ಪುಟಗಳ ಡೆತ್ನೋಟ್ಹಲ್ಲಿ ಏನಿದೆ..?
ವಸಂತನಗರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿದ್ದ ನಿಗಮದ ಉಳಿತಾಯ ಖಾತೆಯ ಉಪ ಖಾತೆ ಸ್ವೀಪ್ ಇನ್ ಸ್ವೀಪ್ ಔಟ್ ನ್ನು ಎಂ.ಜಿ ರಸ್ತೆ ಶಾಖೆಗ ಸಚಿವರ ಮೌಖಿಕ ಸೂಚನೆ ಮೇರೆಗೆ ವರ್ಗಾಯಿಸುವಂತೆ ಪತ್ರ ಬರೆಯಲಾಗಿತ್ತು. ವಸಂತನಗರ ಬ್ಯಾಂಕ್ ವ್ಯವಸ್ಥಾಪಕರು ನಿರಾಕರಿಸಿದರೂ ಒತ್ತಾಯಪೂರ್ವಕವಾಗಿ ಜೀರೋ ಬ್ಯಾಲೆನ್ಸ್ ಖಾತೆಯನ್ನು ಮಾರ್ಚ್ 4 ರಂದು ವರ್ಗಾಯಿಸಲಾಗಿತ್ತು.
ಈ ಖಾತೆಗೆ ಮಾರ್ಚ್ 4ರಂದು 25 ಕೋಟಿ ರೂ., 6 ರಂದು 25 ಕೋಟೀ ರೂ., 21 ರಂದು 44 ಕೋಟಿ ರೂ., ರಾಜ್ಯ ಹುಜೂರ್ ಖಜಾನಯಿಂದ 43.33 ಕೋಟಿ ರೂ. ಮತ್ತು ಮೇ 21 ರಂದು 50 ಕೋಟಿ ರೂ ಸೇರಿ ಒಟ್ಟು 187.33 ಕೋಟಿ ರೂ.ಗಳನನು ನಿಗಮ ಹೊಂದಿರುವ ವಿವಿಧ ಬ್ಯಾಂಕ್ ಖಾತೆಗಳಿಂದ ಮತ್ತು ರಾಜ್ಯ ಹುಜೂರ್ ಖಜಾನೆಯಿಂದ ವರ್ಗಾಯಿಸಲಾಗಿತ್ತು.
ಸದರಿ ಖಾತೆಯ ಚೆಕ್ ಬುಕ್ ಮತ್ತು ಪಾಸ್ಬುಕ್ ಅನ್ನು ಬ್ಯಾಂಕ್ನವರು ಇದೂವರೆಗೆ ನೀಡಿಲ್ಲ. ನಾನು ಸಹ ಕೆಲಸದ ಒತ್ತಡದಿಂದಾಗಿ ಬ್ಯಾಂಕ್ ಸಂಪರ್ಕ ಮಾಡಿರಲಿಲ್ಲ. ಯಾವುದೇ ಪಾವತಿಗಳು ಇಲ್ಲದ ಕಾರಂ ಅವುಗಳ ಅವಶ್ಯಕತೆ ಬೀಳಲಿಲ್ಲ. ಆದರೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ ಪದ್ಮನಾಭ ಒತ್ತಾಯಪೂರ್ವಕವಾಗಿ ಅನುದಾನವನ್ನು ವರ್ಗಾಯಿಸುತ್ತಿದ್ದರು. ನಮಗೆ ಈ ಒಳಸಂಚು ಅರ್ಥವಾಗಲೆ ಇಲ್ಲ.
ಮೇ 21 ರಂದು 50 ಕೋಟಿ ರೂ.ಗಳ ಚೆಕ್ ಅನ್ನು ಯಾರಿಗೂ ತಿಳಿಯದ ಹಾಗೆ ಹಣ ತರಲು ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆಂದು ಲೆಕ್ಕಾಧಿಕಾಗಳು ಹೇಳಿದರು. ನಾನು ಒಪ್ಪದಿದ್ದರೂ ಒತ್ತಡ ತಂದು ಆರ್ಟಿಜಿಎಸ್ ಮಾಡಿಸಿ ಹಣ ತರಲು ಹೇಳಿದರು. ಆದರೆ ಮ್ಯಾನೇಜರ್ ಶುಚಿಸ್ಮಿತಾ ಅವರು ಚೆಕ್ ಬುಕ್ ಮತ್ತು ಪಾಸ್ಬುಕ್ ಕೊಡಲು ನಿರಾಕರಿಸಿ, ನಾಳೆ ನಾನೇ ನಿಗಮಕ್ಕೆ ಬರುವುದಾಗಿ ಹೇಳಿದರು.