ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಅಫ್ತಾಬ್ ಪೂನಾವಾಲಾ ಕೂಡ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಟಾರ್ಗೆಟ್ ಲಿಸ್ಟ್ ನಲ್ಲಿದ್ದಾನೆ ಎಂಬ ವಿಷಯ ಬಹಿರಂಗಗೊಂಡಿದೆ.
2022ರ ಮೇನಲ್ಲಿ ಶ್ರದ್ಧಾ ವಾಕರ್ ಅವರನ್ನು ಅಫ್ತಾಬ್ ಪೂನಾವಾಲಾ ಕೊಲೆ ಮಾಡಿ ನಂತರ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ಫ್ರಿಜ್ಡ್ ನಲ್ಲಿ ಇಟ್ಟಿದ್ದನು. ಈ ಪ್ರಕರಣ ದೇಶಾದ್ಯಂತ ತೀವ್ರ ಆಕ್ರೋಶ ಹಾಗೂ ಚರ್ಚೆಗೆ ಗ್ರಾಸವಾಗಿತ್ತು. ಮೂಲಗಳನ್ನು ನಂಬುವುದಾದರೆ, ಮಾಧ್ಯಮಗಳ ವರದಿಯನ್ನು ಗಮನದಲ್ಲಿಟ್ಟುಕೊಂಡು, ತಿಹಾರ್ ಜೈಲು ಆಡಳಿತವು ಸಹ ಅಲರ್ಟ್ ಆಗಿದೆ. ಜೈಲಿನಲ್ಲಿ ಅಫ್ತಾಬ್ ಪೂನಾವಾಲಾಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಪೂನಾವಾಲಾನ ಸುರಕ್ಷತೆಯ ಬಗ್ಗೆ ಜೈಲು ಆಡಳಿತವು ಜಾಗರೂಕವಾಗಿದೆ ಎಂದು ತಿಹಾರ್ ಮೂಲಗಳು ತಿಳಿಸಿವೆ. ಅಫ್ತಾಬ್ ಪೂನಾವಾಲಾನನ್ನು ತಿಹಾರ್ ಜೈಲು ಸಂಖ್ಯೆ 4ರಲ್ಲಿ ಇರಿಸಲಾಗಿದೆ. ತಿಹಾರ್ ಮೂಲಗಳ ಪ್ರಕಾರ, ಮುಂಬೈ ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಆದರೆ ಅವರು ಮಾಧ್ಯಮಗಳಲ್ಲಿನ ವರದಿಗಳನ್ನು ಗಮನಿಸಿದ್ದಾರೆ.
ವಾಸ್ತವವಾಗಿ, ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿ ಶಿವಕುಮಾರ್ ಗೌತಮ್, ಅಫ್ತಾಬ್ನನ್ನು ಕೊಲ್ಲಲು ಬಯಸುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ಮೂಲಗಳ ಪ್ರಕಾರ, ಅಫ್ತಾಬ್ ಪೂನಾವಾಲಾ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಶೂಟರ್ಗಳಿಗೆ ಗುರಿಯಾಗಿದ್ದಾನೆ. ತಿಹಾರ್ ಜೈಲಿನಲ್ಲಿಯೇ ಅಫ್ತಾಬ್ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ.
ಏನಿದು ಶ್ರದ್ಧಾ ವಾಕರ್ ಹತ್ಯೆ ಪ್ರಕರಣ?
2022ರ ಮೇನಲ್ಲಿ ದೆಹಲಿಯ ಛತ್ತರ್ಪುರ ಪ್ರದೇಶದಲ್ಲಿ ಶ್ರದ್ಧಾ ವಾಕರ್ನನ್ನು ಕೊಲೆ ಮಾಡಲಾಗಿತ್ತು. ಹತ್ಯೆಯ ನಂತರ ಶ್ರದ್ಧಾಳ ದೇಹವನ್ನು 30ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಲಾಗಿತ್ತು. ಮಾಹಿತಿ ಪ್ರಕಾರ ಶ್ರದ್ಧಾ ಶವದ ತುಂಡುಗಳನ್ನು ಮೂರು ವಾರಗಳ ಕಾಲ ಫ್ರಿಡ್ಜ್ ನಲ್ಲಿಟ್ಟಿದ್ದು, ಕ್ರಮೇಣ ನಗರದ ಹಲವು ಪ್ರದೇಶಗಳಲ್ಲಿ ಬಿಸಾಡಲಾಗಿತ್ತು.