ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನೆನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಪಿಎಲ್ ಖಾತೆದಾರರಿಗೆ ಅನ್ನಭಾಗ್ಯದ ಹಣ ಹಾಕುವುದರ ಜೊತೆಗೆ ಮಹದಾಯಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಹದಾಯಿ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನಿರಾಕರಣೆ ಹಿನ್ನಲೆ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ತೀರ್ಮಾನಿಸಲಾಯಿತು. ಅಲ್ಲದೆ ಮುಂದಿನ ಸಚಿವ ಸಂಪುಟ ಸಭೆ ಕಲಬುರಗಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್ ಮಾಹಿತಿ ನೀಡಿದರು.
ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು:
- ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನ 59 ಕೈದಿಗಳ ಬಿಡುಗಡೆಗೆ ನಿರ್ಧಾರ.
- ಮೈಸೂರಿನ ನೆಫ್ರೋಲಜಿ 100 ಬೆಡ್ ಸಾಮರ್ಥ್ಯ ಹೆಚ್ಚಳಕ್ಕೆ ಅನುಮೋದನೆ. ವೈದ್ಯಕೀಯ ಶಿಕ್ಷಣ ಇಲಾಖೆ, ಕಿಮ್ಸ್ ಆಸ್ಪತ್ರೆಗೆ ಸಲಕರಣೆ ಖರೀದಿಗೆ 75 ಕೋಟಿ ಅನುದಾನ ನೀಡಲು ಅನುಮೋದನೆ. ಕಲಬುರಗಿಯ ಮಕ್ಕಳ ಆಸ್ಪತ್ರೆಯನ್ನ ಇಂದಿರಾಗಾಂಧಿ ಆಸ್ಪತ್ರೆ ಸಹಯೋಗದಲ್ಲಿ 150 ಹಾಸಿಗೆ ಆಸ್ಪತ್ರೆ ಸ್ಥಾಪನೆಗೆ 221 ಕೋಟಿ ಬಿಡುಗಡೆಗೆ ಅನುಮೋದನೆ.
- ಕಾರ್ಮಿಕ ಇಲಾಖೆಯ ಬಳಕೆದಾರರಿಂದ ಸಂಗ್ರಹಿಸುವ, ಕಾನೂನು ಇಲಾಖೆ ಅಡಿ ಬರುವ ಎಂಟು ಕಾಯ್ಡೆ ಅಡಿ, ಬಳಕೆದಾರರಿಂದ ಸಂಗ್ರಹಿಸುವ ದಂಡವನ್ನ ಶೇಕಡ 30ರಷ್ಟು ಹೆಚ್ಚಳಕ್ಕೆ ನಿರ್ಧಾರ.
- ಅನ್ನಭಾಗ್ಯ ಯೋಜನೆ ಅಡಿ 5 ಕೆಜಿ ಅಕ್ಕಿಯ ಹಣವನ್ನ ನೀಡುವ ಯೋಜನೆ ಮುಂದುವರೆಸಲು ನಿರ್ಧಾರ.
- ಉಡುಪಿಯ ಕಾರ್ಕಳದಲ್ಲಿ ಪಿಪಿಪಿ ಮಾದರಿಯಲ್ಲಿ ಟೆಕ್ಸ್ಟೈಲ್ಸ್ ಪಾರ್ಕ್ ಮಾಡಲು ಅನುಮೋದನೆ.
- ಮುಂದಿನ ಸಚಿವ ಸಂಪುಟ ಸಭೆಯನ್ನು ಕಲಬುರಗಿಯಲ್ಲಿ ರಾಜ್ಯ ಸರ್ಕಾರ ತೀರ್ಮಾನಸಿದೆ.