ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಅಗಲಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ. ಅವರ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಪೋಸ್ಟ್ ಮಾಡಿ ಎಸ್ಎಂ ಕೃಷ್ಣ ಅವರ ಸಾಧನೆಗಳನ್ನ ಮೆಲುಕು ಹಾಕಿದ್ದಾರೆ.
ಟ್ವೀಟ್ನಲ್ಲಿ ಹೇಳಿದ್ದೇನು..?
ಕರ್ನಾಟಕ ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ, ಶಿಸ್ತು ಹಾಗೂ ಪ್ರಬುದ್ಧ ಆಡಳಿತಕ್ಕೆ ಮಾದರಿಯಾಗಿದ್ದ ನಾಡಿನ ಇತಿಹಾಸದಲ್ಲಿ ತಮ್ಮ ಸಜ್ಜನಿಕೆ ಹಾಗೂ ಘನತೆಯ ನಡವಳಿಕೆಯಿಂದ ವಿಶೇಷ ಚಾಪು ಮೂಡಿಸಿದ್ದ ಎಸ್.ಎಂ ಕೃಷ್ಣ ಅವರು ಇನ್ನಿಲ್ಲವಾಗಿರುವ ಸುದ್ದಿ ಅತ್ಯಂತ ನೋವು ತಂದಿದೆ.
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿ ಇತಿಹಾಸದಲ್ಲಿ ತಮ್ಮ ಶಾಶ್ವತ ಹೆಜ್ಜೆ ಗುರುತು ಮೂಡಿಸಿರುವ ಹೆಮ್ಮೆಯ ಕನ್ನಡಿಗ ಎಸ್.ಎಂ ಕೃಷ್ಣರವರು ಮುಖ್ಯಮಂತ್ರಿಗಳಾಗಿ ಕರ್ನಾಟಕದ ಅಭಿವೃದ್ಧಿಗೆ ಅದರಲ್ಲೂ ಬೆಂಗಳೂರನ್ನು ಸಿಲಿಕಾನ್ ಸಿಟಿ ಎನಿಸಿಕೊಳ್ಳಲು ಕೊಟ್ಟ ಕೊಡುಗೆ ಎಂದೆಂದಿಗೂ ಮರೆಯಲಾಗದು.
ಕೇಂದ್ರ ಸಚಿವ ಸಂಪುಟದಲ್ಲಿ ವಿವಿಧ ಹುದ್ದೆಗಳೊಂದಿಗೆ ಮಹತ್ವದ ವಿದೇಶಾಂಗ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಮಹಾರಾಷ್ಟ್ರದ ರಾಜ್ಯಪಾಲರು ಆಗಿ ಸೇವೆ ಸಲ್ಲಿಸಿದ್ದ ಮಾನ್ಯ ಕೃಷ್ಣರವರು ನಾಲ್ಕು ತಲೆಮಾರಿನ ರಾಜಕಾರಣದ ಬಹುದೊಡ್ಡ ಕೊಂಡಿಯಾಗಿದ್ದರು. ಆರೋಗ್ಯಕರ ಮನಸ್ಸು ಕ್ರಿಯಾಶೀಲತೆಯ ಸಂಕೇತ ಎನ್ನುವ ನಿಟ್ಟಿನಲ್ಲಿ ತಮ್ಮ ಬದುಕಿನ ಕೊನೆಯ ಉಸಿರಿರುವವರೆಗೂ ಸಂಸ್ಕಾರ ಹಾಗೂ ಸುಸಂಸ್ಕೃತ ನಡವಳಿಕೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದರು. ತಮ್ಮ ಇಡೀ ರಾಜಕಾರಣದ ಜೀವನದಲ್ಲಿ ಕಪ್ಪು ಕಲೆಯನ್ನು ಎಂದೂ ಅಂಟಿಸಿಕೊಳ್ಳದ ಕೃಷ್ಣರವರು ಪರಿಶುಭ್ರತೆಗೆ ಮಾದರಿಯಾಗಿದ್ದರು.
ಕರ್ನಾಟಕದ ರಾಜಕಾರಣದಲ್ಲಿ ಕೃಷ್ಣರಿಗೆ ಕೃಷ್ಣರೇ ಸಾಟಿ ಅವರಿಲ್ಲದ ಕರುನಾಡು ನೆನೆಸಿಕೊಳ್ಳುವುದು ಅತ್ಯಂತ ಕಷ್ಟಕರ, ನಮ್ಮಂತ ಯುವ ಪೀಳಿಗೆಯ ರಾಜಕಾರಣಿಗಳಿಗೆ ಅವರು ಆದರ್ಶದ ದಾರಿದೀಪ, ಅವರು ಇಹಲೋಕವನ್ನು ತ್ಯಜಿಸಿದರೂ ಅವರ ನಡೆ-ನುಡಿ ನಿತ್ಯವೂ ಜೀವಂತವಾಗಿ ರಾಜಕಾರಣದ ಆಗಸದಲ್ಲಿ ಮಿನುಗುತ್ತಿರುತ್ತದೆ.
ಕರ್ನಾಟಕದ ಇತಿಹಾಸ ಇರುವವರೆಗೂ ಎಸ್ ಎಂ ಕೃಷ್ಣರು ಅಜರಾಮರ, ಅವರ ಅಗಲಿಕೆಯ ದುಃಖ ಅವರ ಕುಟುಂಬದಷ್ಟೇ ಲಕ್ಷಾಂತರ ಜನರನ್ನು ಬಾಧಿಸಲಿದೆ ಈ ದುಃಖದೊಂದಿಗೆ ನಾವು ಭಾಗಿಗಳು. ಎಸ್ಎಂ ಕೃಷ್ಣ ರವರ ರಾಜಕೀಯದ ಕೊನೆಯ ದಿನದ ನಿಲುವುಗಳು ಭಾರತದ ಸುಭದ್ರತೆಗೆ ಪ್ರೇರಣೆಯ ಶಕ್ತಿಯಾಗಿತ್ತು, ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಆತ್ಮ ಸದಾ ಕರುನಾಡು ಹಾಗೂ ದೇಶಕ್ಕಾಗಿ ಮಿಡಿಯುತ್ತಿರುತ್ತದೆ ಎಂಬ ಭಾವ ನನ್ನದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.