ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದ್ದ ಮುಡಾ ಹಗರಣದ ಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಪ್ರಮುಖ ದೂರುದಾರರಾಗಿರುವ ಸ್ನೇಹಮಯಿ ಕೃಷ್ಣ ಕಳೆದ ಮೂರು ದಿನಗಳಿಂದ ಕಾಣೆಯಾಗಿರುವುದು ತಿಳಿದುಬಂದಿದೆ. ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ವಿರುದ್ಧ ಕೆಲವೇ ದಿನಗಳ ಹಿಂದೆ ಸೀರೆ ಕಳ್ಳತನದ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಸ್ನೇಹಮಯಿ ಕೃಷ್ಣ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸ್ನೇಹಮಯಿ ಕೃಷ್ಣ ನಾಪತ್ತೆಯಾಗಿದ್ದಾರೆ.
ಮೈಸೂರು ಪೊಲೀಸರು ಸ್ನೇಹಮಯಿ ಕೃಷ್ಣ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಅವರ ಮೊಬೈಲ್ ಮೂರು ದಿನಗಳಿಂದ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ. ನಾಡದೇವತೆ ಮೈಸೂರಿನ ತಾಯಿ ಚಾಮುಂಡೇಶ್ವರಿ ದೇವಿಗೆ ಕಾಣಿಕೆಯಾಗಿ ನೀಡಿದ್ದ ಲಕ್ಷಾಂತರ ರುಪಾಯಿ ಬೆಲೆಬಾಳುವ ಸೀರೆಗಳನ್ನು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ರೂಪಾ ಅವರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಅವರು ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಗೆ ವಿಡಿಯೋ ಸಮೇತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು.
ಚಾಮುಂಡೇಶ್ವರಿ ದೇವಿಗೆ ಕಾಣಿಕೆಯಾಗಿ ಬಂದ ಸೀರೆಗಳನ್ನು ಕಾರ್ಯದರ್ಶಿ ರೂಪಾ ಅವರ ಕಾರಿನಲ್ಲಿ ತುಂಬಿಸಿ ಅವ್ಯವಹಾರ ಮಾಡಲಾಗುತ್ತಿದೆ. ಯುವಕನೊಬ್ಬ ಕಾರಿಗೆ ಸೀರೆ ತುಂಬಿಸಿಕೊಂಡು ಹೋಗುವ ವಿಡಿಯೋದ ಸಿಡಿಯನ್ನು ದೂರಿನೊಂದಿಗೆ ಲಗತ್ತಿಸಿದ್ದರು ಸ್ನೇಹಮಯಿ ಕೃಷ್ಣ. ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೇವಸ್ಥಾನದ ಕಾರ್ಯದರ್ಶಿ ರೂಪಾ ಅವರು ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ಕೂಡ ದಾಖಲಾಗಿದೆ.