ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೂರಕ್ಕೆ ಮೂರೂ ಗೆಲ್ಲುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಿದ್ದರೆ, ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿಪಿ ಯೋಗೇಶ್ವರ್ ಬೇರೆಯದೇ ಮಾತು ಹೇಳ್ತಿದ್ದಾರೆ. ಅವರ ಮಾತುಗಳನ್ನು ಕೇಳುತ್ತಿದ್ದರೆ ಯೋಗೇಶ್ವರ್ ರಿಸಲ್ಟ್ಗೂ ಮುನ್ನವೇ ಸೋಲೊಪ್ಪಿಕೊಂಡರಾ ಎಂಬ ಪ್ರಶ್ನೆ ಮೂಡುತ್ತಿವೆ. ಚುನಾವಣೆ ಆರಂಭಕ್ಕೂ ಮುನ್ನ ಗೌಡರ ಕುಟುಂಬಕ್ಕೆ ಸೋಲಿಗೆ ಸಿದ್ಧರಾಗಿ ಎಂದು ಸಂದೇಶ ನೀಡಿದ್ದ ಯೋಗೇಶ್ವರ್, ಚುನಾವಣೆ ಮುಗಿದ ನಂತರ ಆಡುತ್ತಿರುವ ಮಾತುಗಳೇ ಬೇರೆ.
ಚನ್ನಪಟ್ಟಣ ಚುನಾವಣೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯೋಗೇಶ್ವರ್ ಯಾರು ಬೇಕಾದರೂ ಗೆಲ್ಲಬಹುದು. ಯಾರೇ ಗೆದ್ದರೂ ಅಂತರ ಕೂದಲೆಳೆ ಅಂತರದಲ್ಲಿರುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ, ಚನ್ನಪಟ್ಟಣದಲ್ಲಿ ಬಹಳಷ್ಟು ವರ್ಕೌಟ್ ಆಗಿದೆ ಎಂದು ಹೇಳುವ ಮೂಲಕ ಸೋಲಿನ ಸುಳಿವು ಕೊಟ್ಟಿದ್ದಾರೆ. ಅಲ್ಲದೇ ಜಮಿರ್ ಅಹಮ್ಮದ್ ಖಾನ್ ಕರಿಯ ಕುಮಾರಸ್ವಾಮಿ ಹೇಳಿಕೆ ಸೋಲಿನ ಕಾರಣವಾಗಬಹುದು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಸಮಬಲದ ಹೋರಾಟ ಅಂತಾ ಅನ್ಸುತ್ತೆ. ಕೆಲವರ ಮಾತುಗಳು ಜನರ ಭಾವನೆಗೆ ಘಾಸಿ ಆಗಿದೆ ಅನ್ನಿಸುತ್ತೆ. ಸಚಿವ ಜಮೀರ್ ಮಾತಿನಿಂದ ಮುಸ್ಲಿಮರಿಂದ ಸ್ವಲ್ಪ ಮತ ಬಂದ್ರೂ. ನನಗೆ ಬರಬೇಕಿದ್ದ ಒಕ್ಕಲಿಗ ಮತಗಳು ಬಂದಿಲ್ಲ ಅನ್ನಿಸುತ್ತೆ ಎಂದು ಪರೋಕ್ಷವಾಗಿ ಜಮೀರ್ ಅಹಮ್ಮದ್ ಖಾನ್ ಕುಮಾರಸ್ವಾಮಿ ಬಗ್ಗೆ ಆಡಿದ ಮಾತಿನ ಬಗ್ಗೆ ಅಸಮಾಧಾನ ಹೊರಹಾಕಿದರು. ಒಕ್ಕಲಿಗ ಮತ ಕ್ರೋಢೀಕರಣ ಆಗಿದ್ದರೆ ಫಲಿತಾಂಶ ಮೇಲೆ ಪರಿಣಾಮ ಬೀರಲಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಆರ್ಭಟ ಜೋರಾಗಿತ್ತು. ಅವರ ಸಮುದಾಯದ ಜನರು ಕ್ಷೇತ್ರದಲ್ಲಿದ್ದು ಕೆಲಸ ಮಾಡಿದರು. ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್, ನಾನು ಒಕ್ಕಲಿಗನಾಗಿದ್ರೂ ನಮ್ಮ ಜನ ಇನ್ನೂ ಅವರಿಗೆ ಅಂಟಿಕೊಂಡು ಕೂತಿದ್ದಾರೆ ಎನ್ನುವ ಮೂಲಕ ಒಕ್ಕಲಿಗ ಸಮುದಾಯದ ಮತಗಳು ನಿರೀಕ್ಷೆಯ ಮಟ್ಟದಲ್ಲಿ ಬಂದಿಲ್ಲ ಎಂಬ ಸೂಚನೆ ಕೊಟ್ಟಿದ್ದಾರೆ.
ಗೆದ್ದರೆ ಕಾಂಗ್ರೆಸ್ ಯೋಜನೆ, ಕೆಲಸ ಮಾಡಿದೆ ಅಂತಾ ಅಂದುಕೊಳ್ಳಬೇಕು. ಸೋತರೆ ಪಕ್ಷಾಂತರ ಕಾರಣಕ್ಕೆ ಜನ ಸೋಲಿಸಿದ್ದಾರೆ ಅಂದುಕೊಳ್ಳಬೇಕು. ಜಮೀರ್ ಅಹ್ಮದ್ ಹೇಳಿಕೆಯನ್ನು ವೈಯಕ್ತಿಕವಾಗಿ ಖಂಡಿಸುತ್ತೇನೆ. ಕೆಲವು ನಾಯಕರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಸಚಿವ ಜಮೀರ್ ಮಾತಿನಿಂದ ಮುಸ್ಲಿಮರಿಂದ ಸ್ವಲ್ಪ ಮತ ಬಂದ್ರೂ. ನನಗೆ ಬರಬೇಕಿದ್ದ ಒಕ್ಕಲಿಗ ಮತಗಳು ಬಂದಿಲ್ಲ ಅನ್ನಿಸುತ್ತೆ ಎನ್ನುವ ಮೂಲಕ ಚನ್ನಪಟ್ಟಣ ಸೋಲಬಹುದು ಎಂಬ ಸುಳಿವು ಕೊಟ್ಟಿದ್ದಾರೆ ಯೋಗೇಶ್ವರ್.
ಇದನ್ನು ಓದಿ: ಚನ್ನಪಟ್ಟಣದ ಮಿನಿ ಯುದ್ಧದಲ್ಲಿ ಗೆಲ್ಲುವವರು ಯಾರು?
ಸಾಮಾನ್ಯವಾಗಿ ಯಾವುದೇ ಅಭ್ಯರ್ಥಿ ಫಲಿತಾಂಶ ಬರುವವರೆಗೆ ವಿಶ್ವಾಸದಿಂದಲೇ ಇರುತ್ತಾರೆ. ಆದರೆ ಯೋಗೇಶ್ವರ್ ಮಾತ್ರ ವಿಭಿನ್ನವಾಗಿ ಮಾತನಾಡಿದ್ದಾರೆ. ಯೋಗೇಶ್ವರ್ ಮಾತುಗಳಲ್ಲಿ ಜಮೀರ್ ಅಹ್ಮದ್ ಅವರ ಹೇಳಿಕೆಯಿಂದಾಗಿ ಒಕ್ಕಲಿಗ ಮತಗಳು ಕೈತಪ್ಪಿದವು ಎಂಬ ಅಸಮಾಧಾನ ಎದ್ದು ಕಾಣುತ್ತಿದೆ. ಆದರೆ ಅಂತಿಮ ಫಲಿತಾಂಶಕ್ಕೆ, ರಿಸಲ್ಟ್ ಡೇವರೆಗೆ ಕಾಯಲೇಬೇಕು. ನವೆಂಬರ್ 23ರಂದು ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿಯಲ್ಲಿ ಮತದಾರರು ಯಾರಿಗೆ ಜೈ ಎಂದಿದ್ದಾರೆ ಎನ್ನುವುದು ನಿರ್ಧಾರವಾಗಲಿದೆ.
ಚನ್ನಪಟ್ಟಣದಲ್ಲಿ ನಿಂತಿರುವ ಯೋಗೇಶ್ವರ್ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಇಬ್ಬರಿಗೂ ಕೂಡಾ ಇದು ಪ್ರತಿಷ್ಠೆಯಾಗಿದೆ. ಇಬ್ಬರೂ ಕೂಡಾ ಈ ಹಿಂದಿನ ಚುನಾವಣೆಗಳಲ್ಲಿ ಸೋತಿದ್ದಾರೆ. ಯಾರಾದರೊಬ್ಬರು ಸೋಲಿನ ಹ್ಯಾಟ್ರಿಕ್ ಹೀರೋ ಆಗಲೇಬೇಕು.